ಭಟ್ಕಳ: ಮಾನಸಿಕ ವೈದ್ಯರ ಬಳಿ ಹೋಗುವವರ ಬಗ್ಗೆ ಸಮಾಜ ಕೀಳಾಗಿ ನೋಡುವುದು ಸರಿಯಲ್ಲ. ವ್ಯಕ್ತಿಯ ಮಾನಸಿಕ ಸ್ಥಿತಿ ಒತ್ತಡಕ್ಕೊಳಗಾದಾಗ ಮಾತ್ರ ವ್ಯತಿರಿಕ್ತವಾಗಲಿದೆ ಹೊರತು ಬೇರೆ ಯಾವ ಕಾರಣಗಳಿಂದಲ್ಲ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಹೇಳಿದರು.
ನಾಯಕ ಹೆಲ್ತ್ ಸೆಂಟರ ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಪ್ರಯುಕ್ತ ಜಾಗ್ರತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯು ತನ್ನ ಕೆಟ್ಟ ವರ್ತನೆಯಿಂದ ಮಾನಸಿಕವಾಗಿ ದುರ್ಬಲವಾಗುತ್ತಾನೆ. ಚಿಕ್ಕಮಕ್ಕಳಲ್ಲಿಯೂ ಸಹ ಇದು ಹೆಚ್ಚಾಗುತ್ತದೆ. ಇಂದಿನ ಮಕ್ಕಳ ಶೈಕ್ಷಣಿಕ ಪದ್ಧತಿ ರೂಢಿಕರಿಸುವ ಪಾಲಕರ ರೀತಿಯೂ ಒತ್ತಡ ರೂಪವಾಗಿದೆ. ಇದು ಮಕ್ಕಳೇ ಪಾಲಕರನ್ನು ವಿರೋಧಿಸುವುದಕ್ಕೆ ಕಾರಣವಾಗುತ್ತದೆ. ಅವರ ಕಲಿಕೆಯ ಮೇಲೂ ಪರಿಣಾಮ ಬೀಳುತ್ತದೆ, ಮಾನಸಿಕ ನೆಮ್ಮದಿಯನ್ನೂ ಕೆಡಿಸುತ್ತದೆ. ಅಂದಿನ ನಮ್ಮ ಕಾಲದ ವಿದ್ಯಾಭ್ಯಾಸದ ರೀತಿಗೂ ಈಗಿನ ಕಾಲದ ವಿದ್ಯಾಭ್ಯಾಸದ ರೀತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಇಂದಿನ ಮಕ್ಕಳಲ್ಲಿ ಮಾನಸಿಕ ಸದೃಢತೆ ಇಲ್ಲ. ಅಂಕಗಳಿಂದ ಮಕ್ಕಳ ವ್ಯಕ್ತಿಯನ್ನು ಅಳೆಯದೇ ಅವರು ಸಾಮಾಜಿಕವಾಗಿ ಮತ್ತು ಅವರ ಗುಣದಿಂದ ಗುರುತಿಸುವ ಕೆಲಸ ಆಗಬೇಕು. ಮಕ್ಕಳು ಈ ಸಮಾಜಕ್ಕೆ ಆಸ್ತಿಯಾಗಬೇಕು ಹೊರತು ಕಂಟಕವಾಗಬಾರದು ಎಂದು ಹೇಳಿದರು.
ಹೊನ್ನಾವರದ ಸಂತ ಇಗ್ನೇಷಿಯಸ್ ಆಸ್ಪತ್ರೆಯ ಮನೋರೋಗ ತಜ್ಞ ಮಾತನಾಡಿ, ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎಂಬುದು ಸಾರ್ವಕಾಲಿಕ ಸತ್ಯ. ವ್ಯಕ್ತಿಯ ಮಾನಸಿಕ ಆರೋಗ್ಯ ಸರಿಪಡಿಸಿಕೊಳ್ಳಲು ನಾವು ಏನು ಮಾಡಬೇಕು ಎಂಬ ಪ್ರಶ್ನೆ ಜನರಲ್ಲಿದೆ. ವ್ಯಕ್ತಿಯ ಆರೋಗ್ಯವು ಮಾನಸಿಕ ಸುಸ್ಥಿತಿಯಿಂದ ಅರ್ಥವಾಗಲಿದೆ. ಒಬ್ಬರಲ್ಲಿ ಒಂದೊಂದು ರೀತಿಯ ಪದ್ಧತಿಯಿಂದ ಮಾನಸಿಕತೆಯಿಂದ ಸರಿಪಡಿಸಬಹುದಾಗಿದೆ. ಆಧುನಿಕತೆಯ ಸರಪಳಿಯಿಂದ ಮನುಷ್ಯ ಸಂಕಷ್ಟ ಅನುಭವಿಸುತ್ತಿದ್ದಾನೆ. ಹಣ ಸಂಪಾದಿಸುವ ದಾರಿಯಲ್ಲಿ ಆರೋಗ್ಯ ಕಳೆದು ಹೋಗಿ ಮಾನಸಿಕತೆಗೆ ಒಳಗಾಗುತ್ತೇವೆ. ಮನುಷ್ಯನಲ್ಲಿನ ಚಿಕ್ಕಪುಟ್ಟ ನಕಾರಾತ್ಮಕ ಬದಲಾವಣೆ ಮಾನಸಿಕ ಅಸಮತೋಲನಕ್ಕೆ ಕಾರಣವಾಗಲಿದೆ. ಮೌಢ್ಯತೆಗೆ ನಮ್ಮ ಮಾನಸಿಕ ಕಾಯಿಲೆಯನ್ನು ಅಳೆಯಲು ಸಾಧ್ಯವಿಲ್ಲ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಹೊನ್ನಾವರದ ಸಂತ ಇಗ್ಲೇಷಿಯಸ್ ಆಸ್ಪತ್ರೆ ಆಡಳಿತಾಧಿಕಾರಿ ಸಿ.ಪಿಲಿಪಾ ಎಸ್. ಮಾತನಾಡಿದರು. ವೇದಿಕೆಯಲ್ಲಿ ನಾಯಕ ಹೆಲ್ತ್ ಸೆಂಟರ್ನ ನೇತ್ರ ತಜ್ಞ ಡಾ.ವಿಶ್ವನಾಥ ನಾಯಕ ಉಪಸ್ಥಿತರಿದ್ದು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಾಯಕ ಹೆಲ್ತ ಸೆಂಟರ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.