ಯಲ್ಲಾಪುರ: ವಿಶ್ವದ ಎಲ್ಲ ಒಳ್ಳೆಯದನ್ನು ಸ್ವೀಕರಿಸುವ. ಗೌರವಿಸುವ ತೆರೆದ ಮನಸ್ಸು ಸನಾತನ ಹಿಂದೂ ಧರ್ಮದ್ದು, ಹೀಗಾಗಿ ಹಿಂದೂ ಧರ್ಮ ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ಸನಾತನ ಎಂದರೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲದ ನಿತ್ಯನೂತನ. ಇದನ್ನು ನಾಶಮಾಡುತ್ತೇನೆಂದರೆ ಸೂರ್ಯನನ್ನು ನಾಶ ಮಾಡುತ್ತೇನೆ ಎನ್ನುವಷ್ಟು ಬಾಲಿಷ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ನುಡಿದರು.
ಪಟ್ಟಣದ ಶಾರದಾಂಬಾ ದೇವಸ್ಥಾನಕ್ಕೆ ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಆಯೋಜಿಸಿರುವ ‘ಶೌರ್ಯ ಜಾಗರಣ ರಥ ಯಾತ್ರೆ’ಯ ರಥಕ್ಕೆ ಪೂಜೆ ಸಲ್ಲಿಸಿ, ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಆಯೋಧ್ಯೆಯಲ್ಲಿ ರಾಮಮಂದಿರದ ಕನಸು ನನಸಾಗುವ ಕ್ಷಣ ಬರುತ್ತಿದೆ. ಬಂಧನದಲ್ಲಿದ್ದ, ಮುಳ್ಳು ಬೇಲಿಗಳ ನಡುವೆ ಭದ್ರ ರಕ್ಷಣೆಯಲ್ಲಿದ್ದ ರಾಮನನ್ನು ನೋಡಿದ್ದೇವು. ಇದೀಗ ಭವ್ಯವಾದ ನೆಲೆಯಲ್ಲಿ ಸ್ವತಂತ್ರನಾಗಿ ಪ್ರತಿಷ್ಠಾಪಿಸಲ್ಪಡುವ ಶ್ರೀರಾಮನ ವಿಗ್ರಹವನ್ನು ನೆನಪು ಮಾಡಿಕೊಳ್ಳುವುದೇ ಆನಂದದ ಕ್ಷಣ. ಎಂದ ಶ್ರೀಗಳು ಹಿಂದೂ ಧರ್ಮದಿಂದ ಇನ್ನಷ್ಟು ಹೆಚ್ಚು ಯುವಕರು, ಸೈನಿಕರಾಗಿ, ಪೊಲೀಸರಾಗಿ ದೇಶ, ಧರ್ಮದ ರಕ್ಷಣೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕ ಮಾತನ್ನಾಡಿದ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಇತಿಹಾಸ ವಿವರಿಸಿ, ಹಿಂದೂ ಸಮಾಜ ಬಲಿದಾನದ, ಪರಾಕ್ರಮದ ಸಮಾಜ. ವಿರೋದಿಗಳ ದಾಳಿಗೆ ಯಾವ್ಯಾವಾಗ ಹಿಂದೂ ಧರ್ಮ ಎದ್ದು ನಿಂತಿದೆಯೋ ಆವಾಗೆಲ್ಲ ಸನಾತನ ಧರ್ಮಕ್ಕೆ ಜಯ ಸಿಕ್ಕಿದೆ. ಅನೇಕ ದಾಳಿಗಳ ಹೊರತಾಗಿಯೂ ಪರಮ ವೈಭವದ ಸ್ಥಿತಿಗೆ ಹೆಜ್ಜೆ ಹಾಕುತ್ತಿದೆ ಹಿಂದೂ ಸಮಾಜ ಎಂದರು.
ಶ್ರೀ ರಾಮ ಮೆಡಿಕಲ್ಸ್ ಮಾಲಕ ದಿಲೀಪ ಭಟ್ಟ, ರಥ ಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ, ವಿ.ಹಿಂ.ಪ, ನ ಕಾರ್ಯದರ್ಶಿ ಅನಂತ ಗಾಂವ್ಕರ್, ಗಿರೀಶ ಭಾಗ್ವತ ವೇದಿಕೆಯಲ್ಲಿದ್ದರು. ಸುಜನ ದುರಂದರ ದೇಶಭಕ್ತಿ ಗೀತೆ ಹಾಡಿದರು, ನರಸಿಂಹ ಭಟ್ಟ ವೇದಘೋಷ ಪಠಿಸಿದರು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ ಸ್ವಾಗತಿಸಿದರು, ರಾಮು ನಾಯ್ಕ ನಿರೂಪಿಸಿದರು. ವಿ.ಹಿಂ.ಪ. ತಾಲೂಕು ಅಧ್ಯಕ್ಷ ನಾರಾಯಣ ನಾಯಕ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಪಟ್ಟಣದಲ್ಲಿ ಶೌರ್ಯ ರಥ ಯಾತ್ರೆಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹಿಳಾ ಭಜನಾ ತಂಡಗಳು ಎಲ್ಲರ ಗಮನ ಸೆಳೆದವು.