Slide
Slide
Slide
previous arrow
next arrow

ಅರಣ್ಯ ಅತಿಕ್ರಮಣದಾರರ ಹಕ್ಕಿಗೆ ಮಾರಕವಾಗಿರುವ ಅರಣ್ಯ ಸಚಿವರ ಟಿಪ್ಪಣಿ

300x250 AD

ಗೋಕರ್ಣ: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ ಬಿ.ಖಂಡ್ರೆಯವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗಳಿಗೆ ಅರಣ್ಯ ಪ್ರದೇಶದ ಎಲ್ಲಾ ರೀತಿಯ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲು ಕಂದಾಯ, ಗೃಹ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ಹಾಗೂ ಇತರ ಸಂಬಂಧಿತ ಇಲಾಖೆಯ ಅಧಿಕಾರಿಗಳು/ನುರಿತ ವಿಷಯ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಅಧಿಕಾರಿಗಳ ರಾಜ್ಯ ಮಟ್ಟದ ಕಾರ್ಯಪಡೆಯನ್ನು ರಚಿಸಬೇಕು ಎಂಬ ಟಿಪ್ಪಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವುದು ಆತಂಕಕಾರಿಯಾಗಿದ್ದು, ಅರಣ್ಯ ಭೂಮಿ ಅತಿಕ್ರಮಣದಾರರ ನಿದ್ದೆಗೆಡಿಸಿದೆ.

ಹತ್ತಾರು ದಶಕಗಳಿಂದ ಅರಣ್ಯ ಹಾಗೂ ಕಂದಾಯ ಭೂಮಿಗಳಲ್ಲಿ ಬಗರ್ ಹುಕುಂ ಸಾಗುವಳಿಯಲ್ಲಿ ತೊಡಗಿರುವ ಲಕ್ಷಾಂತರ ದಲಿತ, ಆದಿವಾಸಿ, ಹಿಂದುಳಿದ, ಬಡ ಕುಟುಂಬಗಳನ್ನು ನಿರ್ದಯವಾಗಿ ಬೇಸಾಯದಿಂದ ಒಕ್ಕಲೆಬ್ಬಿಸುವ ಹೀನ ಪ್ರಯತ್ನವಾಗಿದೆ. ದಲಿತ ಮತ್ತು ಹಿಂದುಳಿದ ವರ್ಗಗಳ ಹಿತ ರಕ್ಷಕ, ಕರ್ನಾಟಕದ ಪ್ರಗತಿಪರ ಭೂ ಸುಧಾರಣೆಯ ಹರಿಕಾರ ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಸಿದ್ದಾಂತದ ಪ್ರತಿಪಾದಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಾಗಿದ್ದಾರೆ. ಹೀಗಾಗಿ ಈ ಟಿಪ್ಪಣಿಗೆ ಅನುಮೋದನೆ ಮಾಡದೇ ಅದನ್ನು ಕಸದ ಬುಟ್ಟಿಗೆ ಎಸೆಯಬೇಕು ಎನ್ನುವುದು ಕರ್ನಾಟಕ ಪ್ರಾಂತ ರೈತ ಸಂಘದ ಆಗ್ರಹವಾಗಿದೆ.

ಕರ್ನಾಟಕದಾದ್ಯಂತ ಬಹುತೇಕ ಬಡ, ದಲಿತ, ಹಿಂದುಳಿದ ವರ್ಗಗಳಿಗೆ ಸೇರಿರುವ ಸುಮಾರು ಹತ್ತು ಲಕ್ಷದಷ್ಟು ಕುಟುಂಬಗಳು ಪಾರಂ ನಂ 50, 53 ಹಾಗೂ 57 ರಲ್ಲಿ ತಮ್ಮ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿ ಭೂಮಿ ಹಕ್ಕಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ರೀತಿ ಬಡವರು ಸ್ವಾಧೀನದಲ್ಲಿರುವ ಸರ್ಕಾರಿ ಕಂದಾಯ ಭೂಮಿಯನ್ನು ಈ ಹಿಂದಿನ ಸರ್ಕಾರಗಳು, ಸಲ್ಲಿಕೆಯಾಗಿರುವ ಸಾಗುವಳಿ ಸಕ್ರಮ ಕೋರಿ ಅರ್ಜಿಗಳನ್ನು ಹಾಗೂ ಬಡವರ ಸ್ವಾಧೀನವನ್ನು ಸರಿಯಾಗಿ ಪರಿಶೀಲಿಸದೇ ಲಕ್ಷಾಂತರ ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಭಾರೀ ಅನ್ಯಾಯವನ್ನು ಎಸಗಿವೆ. ಈಗ ಇಂತಹ ಭೂಮಿಗಳ ಬಡವರನ್ನು ಒಕ್ಕಲೆಬ್ಬಿಸಲು ವಾಸ್ತವದಲ್ಲಿ ಕಂದಾಯ ಭೂಮಿ ಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಎಂದು ಪಹಣಿ ದಾಖಲೆಗಳಲ್ಲಿ ನಮೂದಾಗಿರುವ ಅಂಶವನ್ನು ಮುಂದಿಟ್ಟುಕೊಂಡು, ಒಕ್ಕಲೆಬ್ಬಿಸುವ ದುರುದ್ದೇಶವನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸಿದೆ.

ಯುಪಿಎ ಸರ್ಕಾರ ತಂದಿರುವ ಅರಣ್ಯ ಹಕ್ಕು ಕಾಯ್ದೆ 2005, ಅರಣ್ಯದಲ್ಲಿ ವಾಸವಿರುವ ಪಾರಂಪರಿಕ ಸಮುದಾಯಗಳ ಭೂಮಿ ಹಕ್ಕನ್ನು ಹಾಗೂ ಅರಣ್ಯ ಭೂಮಿ ಸಾಗುವಳಿ ಹಕ್ಕನ್ನು ಎತ್ತಿ ಹಿಡಿದಿದೆ. ಅರಣ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನ್ವಯ ಸಲ್ಲಿಕೆಯಾಗಿರುವ ಲಕ್ಷಾಂತರ ಅರ್ಜಿಗಳು ಇತ್ಯರ್ಥವಾಗದೇ ಉಳಿದಿವೆ. ಭೂಮಿ ಹಕ್ಕು ನೀಡಬೇಕೆಂದು ಸಾವಿರಾರು ಸಂಖ್ಯೆಯ ಅರಣ್ಯ ಅತಿಕ್ರಮಣದಾರರ ಬಗರ್ ಹುಕುಂ ಸಾಗುವಳಿದಾರರು ನಡೆಸಿದ ಹೋರಾಟಕ್ಕೆ ಮನ್ನಣೆ ನೀಡಿ ಈ ಹಿಂದೆ ಕಂದಾಯ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ ರವರು ವಿಶೇಷ ಆಸಕ್ತಿಯಿಂದಾಗಿ ಮತ್ತೇ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 94 ಗೆ ತಿದ್ದುಪಡಿ ತಂದು ಅವಕಾಶ ಕಲ್ಪಿಸಲಾಗಿತ್ತು. ಅರ್ಜಿ ಸಲ್ಲಿಕೆಯ ಅವಧಿಗಿಂತ ಮೊದಲೇ ಅರ್ಜಿ ಸ್ವೀಕಾರ ನಿಲ್ಲಿಸಿದ್ದರಿಂದ ಮತ್ತೊಮ್ಮೆ 2022-23 ರಲ್ಲಿ ಕೂಡ ಅವಕಾಶ ಕಲ್ಪಿಸಲಾಗಿತ್ತು.

ಹೀಗೆ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ಬಗರ್ ಹುಕುಂ ಸಾಗುವಳಿ ರೈತರಿಗೆ ಜಮೀನು ಮಂಜೂರು ಮಾಡಲು ಸಕ್ರಮಾತಿ ಸಮಿತಿಗಳ ರಚನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗದಿರುವಾಗ, ಅರಣ್ಯ ಮಂತ್ರಿಗಳ ಈ ಟಿಪ್ಪಣಿ ಯಾವ ರೀತಿಯ ಸಂದೇಶವನ್ನು ನೀಡುತ್ತದೆ ಎಂಬುದನ್ನು ಮುಖ್ಯಮಂತ್ರಿಗಳು ಮನಗಾಣಬೇಕು. ಸ್ವಾತಂತ್ರ‍್ಯ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮುಂತಾದ ಸಂವಿಧಾನಾತ್ಮಕ ಮೌಲ್ಯಗಳಿಗೆ ಗಂಭೀರವಾದ ಧಕ್ಕೆ ಬಂದಿರುವ ಇಂದಿನ ರಾಷ್ಟ್ರೀಯ ಸನ್ನಿವೇಶದಲ್ಲಿ ಜಾತ್ಯಾತೀತ ಶಕ್ತಿಗಳ ಬಲವರ್ಧನೆಗೆ ರೈತ, ಕಾರ್ಮಿಕ, ದಲಿತ ಮುಂತಾದ ಜನ ಸಂಘಟನೆಗಳು ಶ್ರಮಿಸುತ್ತಿರುವಾಗ ಇಂತಹ ಹಕ್ಕುಗಳಿಗೆ ರಕ್ಷಣೆ ಒದಗಿಸುವ ಹರಿಕಾರ ಎಂದು ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಖಂಡಿತವಾಗಿ ಜನವಿರೋಧಿಯಾಗಿದೆ.

ಐದು ಎಕರೆ ಒಳಗಿನ ಯಾವುದೇ ಬಡ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯವು ಹಲವಾರು ಬಾರಿ ತನ್ನ ತೀರ್ಪುಗಳಲ್ಲಿ, ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿದಾರರಿಗೆ ರಕ್ಷಣೆ ಒದಗಿಸಿದೆ. ಆದರೂ ರಾಜ್ಯಾದ್ಯಂತ ಬಗರ್ ಹುಕುಂ ಸಾಗುವಳಿ ಹಾಗೂ ಅರಣ್ಯ ಭೂಮಿ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿರುವ ಲಕ್ಷಾಂತರ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವ ರೈತ ಕುಟುಂಬಗಳನ್ನು ಹಾಗೂ ಸಕ್ರಮಗೊಳಿಸಿ ಮಂಜೂರಾತಿ ಆದೇಶ, ಪಹಣಿ ದಾಖಲೆ, ಎಂ.ಆರ್. ದಾಖಲೆಗಳನ್ನು ಪಡೆದಿರುವ ರೈತರನ್ನು ಕೂಡ ಬಲವಂತವಾಗಿ ಒಕ್ಕಲೆಬ್ಬಿಸಲು ಮುಂದಾದಂತಿದೆ.

ಅರಣ್ಯ ಮಂತ್ರಿಗಳು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಟಿಪ್ಪಣಿಯನ್ನು ರದ್ದುಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆ 2005 ರ ಅಡಿ ಸ್ವಾಧೀನದಲ್ಲಿರುವ ಇತರೆ ಸಾಮಾಜಿಕ ಸಮುದಾಯಗಳ ಜನರಿಗೂ ಭೂಮಿ ಹಕ್ಕು ಸಿಗುವಂತೆ ಅಗತ್ಯ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಕಾರ್ಪೊರೇಟ್ ಕಂಪನಿಗಳಿಗೆ ಮೀಸಲು ಅಭಯಾರಣ್ಯ ಸೇರಿದಂತೆ ಸಾವಿರಾರು ಎಕರೆ ಅರಣ್ಯ ಭೂಮಿ ಮಂಜೂರು ಮಾಡಲು ಅವಕಾಶ ಕಲ್ಪಿಸಿರುವ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2023ನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕು.

300x250 AD

ಅತಿಕ್ರಮಣ ಎಲ್ಲೆಲ್ಲಿ?

ಈ ಅತಿಕ್ರಮಣ ಸಮಸ್ಯೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಉದ್ದಗಲ ಈ ಸಮಸ್ಯೆ ಕಾಣಸಿಗುತ್ತದೆ. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಜಾರ್ಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತಿಸಗಡ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಬಹುತೇಕ ಅರಣ್ಯದಿಂದಲೇ ಕೂಡಿರುವ ಪೂರ್ವಭಾರತದ ನಾಗಾಲ್ಯಾಂಡ್, ತ್ರಿಪುರಾ ಸಿಕ್ಕಿಂ, ಮೇಘಾಲಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಅತಿಕ್ರಮಣ ಸಮಸ್ಯೆ ಎದುರಿಸುತ್ತಿದ್ದಾರೆ.

ಸುಮಾರು 12 ಲಕ್ಷಕ್ಕೂ ಅಧಿಕ ಕುಟುಂಬಗಳು ಅರಣ್ಯ ಭೂಮಿಯನ್ನು ಆಶ್ರಯಿಸಿಕೊಂಡಿದ್ದಾರೆ. ಸರಕಾರ ನೀಡುವ ಅಂಕಿ-ಅಂಶಗಳಲ್ಲಿ 12 ಲಕ್ಷ ಎಂದು ತೋರಿಸಿದರೆ ಅದು ವಾಸ್ತವದಲ್ಲಿ 28 ಲಕ್ಷ ಎನ್ನುವುದು ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತ ಅಭಿಪ್ರಾಯವಾಗಿದೆ.

ಕರ್ನಾಟಕಕ್ಕೆ ಹೋಲಿಸಿದರೆ ಶೇ 80ರಷ್ಟು ಅರಣ್ಯದಿಂದಲೇ ಕೂಡಿರುವ ಉತ್ತರ ಕನ್ನಡ ಜಿಲ್ಲೆ ಅತಿಹೆಚ್ಚು ಅತಿಕ್ರಮಣದಾರರ ಪಟ್ಟಿಯಲ್ಲಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಒಟ್ಟು 1.6 ಲಕ್ಷ ಅತಿಕ್ರಮಣದಾರರು ಇದ್ದಾರೆ. ಆದರೆ ತಾಲೂಕು ಹಂತದಲ್ಲಿಯೇ ಸಾಕಷ್ಟು ಅರ್ಜಿಗಳು ತಿರಸ್ಕಾರಗೊಂಡಿವೆ. ನಂತರ ಅಂತಿಮವಾಗಿ ಜಿಲ್ಲಾಮಟ್ಟಕ್ಕೆ ಬಂದದ್ದು, 87,625 ಅರ್ಜಿಗಳು. ಅದರಲ್ಲಿ ಕೇವಲ 2852 ಕುಟುಂಬಗಳಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ಒಟ್ಟು 65220 ಅರ್ಜಿಗಳು ತಿರಸ್ಕೃತಗೊಂಡಿವೆ. ಉಳಿದ 19553 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಇನ್ನು ಶಿವಮೊಗ್ಗ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು 45000 ಅರ್ಜಿಗಳು ತಿರಸ್ಕೃತಗೊಂಡಿವೆ.

ಉತ್ತರ ಕನ್ನಡ ಜಿಲ್ಲೆಯು ಅರಣ್ಯ ಅತಿಕ್ರಮಣದಾರರೇ ಅಧಿಕವಾಗಿದ್ದು, ಅವರಿಗೆ ನ್ಯಾಯ ದೊರೆಯಬೇಕಾಗಿದೆ. ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆ ಹೊರತು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಹೀನ ಮನಸ್ಥಿತಿಗೆ ಇಳಿಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರವಾಗಲಿದೆ.

·        – ಶಾಂತಾರಾಮ ನಾಯಕ, ಕರ್ನಾಟಕ ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ

Share This
300x250 AD
300x250 AD
300x250 AD
Back to top