ಶಿರಸಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಸಾವಿರಕ್ಕೂ ಹೆಚ್ಚಿನ ಜನರು ಸಂಘರ್ಷ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ ಉತ್ತರಕನ್ನಡ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚಿನ ಜನರು ಕೇರ್‌ಟೇಕರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಶಿರಸಿಯಿಂದಲೇ ನೂರಕ್ಕೂ ಹೆಚ್ಚಿನ ಜನರು ಇಸ್ರೆಲ್‌ನಲ್ಲಿ ಕೇರ್‌ಟೇಕರ್ ಉದ್ಯೋಗ ಮಾಡುತ್ತಿದ್ದು, ಇವರೆಲ್ಲರ ರಕ್ಷಣೆಯ ಜವಾಬ್ದಾರಿ ಇದೀಗ ಇಸ್ರೇಲ್ ಸರಕಾರದ ಜೊತೆಗೆ ಭಾರತ ಮತ್ತು ರಾಜ್ಯ ಸರಕಾರದ ಮೇಲಿದೆ.
ಉತ್ತರಕನ್ನಡ ಜಿಲ್ಲೆಯಿಂದ ಇಸ್ರೆಲ್‌ನಲ್ಲಿ ವಾಸವಾಗಿರುವ ಬಹುತೇಕ ಜನರು ಕ್ರಿಶ್ಚಿಯನ್ ಸಮುದಾಯದವರಾಗಿದ್ದಾರೆ. ಇಸ್ರೇಲ್ ಸರಕಾರದಲ್ಲಿ ನಿವೃತ್ತಿಯಾಗುವ ಉದ್ಯೋಗಿಗಳನ್ನು ನೋಡಿಕೊಳ್ಳಲು ಸರಕಾರವೇ ಕೇರ್‌ಟೇಕರ್ ನೇಮಿಸಿಕೊಳ್ಳುತ್ತದೆ. ಈ ಉದ್ಯೋಗಕ್ಕೆ ಉತ್ತಮವಾದ ಸಂಬಳ ಇರುವುದರಿಂದ ಈ ಉದ್ಯೋಗವನ್ನು ಅರಸಿ ಕರ್ನಾಟಕ ರಾಜ್ಯದಿಂದ ಬಹಷ್ಟು ಜನರು ಅಲ್ಲಿಗೆ ಹೋಗಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಶಿರಸಿಯಿಂದ ಇಸ್ರೇಲ್‌ನಲ್ಲಿ ವಾಸವಾಗಿರುವ ಜನರ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ದೂರವಾಣಿ ಮೂಲಕ ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ. ಕೆಲವರದ್ದು ಕರೆ ಸಂಪರ್ಕಿಸುತ್ತಿಲ್ಲ. ಆದ್ದರಿಂದ ಶಿರಸಿಯಲ್ಲಿ ವಾಸವಾಗಿರುವ ಅವರ ಬಂಧುಮಿತ್ರರನ್ನು ಸಂಪರ್ಕಿಸಿದಾಗ ಅವರು ನಮ್ಮ ಕುಟುಂದವರು ಚೆನ್ನಾಗಿದ್ದಾರೆ. ನಮಗೆ ಯುದ್ಧದಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ. ದಿನನಿತ್ಯದ ಕಾರ್ಯಗಳಿಗೆ ಯಾವುದೇ ರೀತಿಯ ಅಡಚಣೆಯಾಗುತ್ತಿಲ್ಲವೆಂದು ಹೇಳಿದ್ದಾರೆಂದು ಮಾಹಿತಿ ನೀಡುತ್ತಿದ್ದಾರೆ.
- ನನ್ನ ತಮ್ಮ ರಿಚರ್ಡ್ ವಾಜ್ ಅವನ ಹೆಂಡತಿ ಲೀಜಾ ವಾಜ್ ಇಸ್ರೇಲ್‌ನಲ್ಲಿ ಕಳೆದ ಎಂಟು ವರ್ಷದಿಂದ ಕೆಲಸಮಾಡುತ್ತಿದ್ದಾರೆ. ಯುದ್ಧದಿಂದ ನಮಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಮತ್ತು ಯುದ್ಧ ಇಸ್ರೇಲ್ ಗಡಿಯಲ್ಲಿ ನಡೆಯುತ್ತಿರುವುದರಿಂದ ನಮಗೆ ಯಾವುದೇ ರೀತಿಯ ಸಮಸ್ಯೆಯಾಗುತ್ತಿಲ್ಲವೆಂದು ದೂರವಾಣಿ ಮೂಲಕ ತಿಳಿಸಿದ್ದಾರೆ.
– ಕಿರಣ ವಾಜ್ (ಇಸ್ರೆಲ್‌ನಲ್ಲಿ ವಾಸಿಸುತ್ತಿರುವ ರಿಚರ್ಡ್ ಸಹೋದರ)
- ನನ್ನ ಮಗ 20 ವರ್ಷದಿಂದಲೇ ಇಸ್ರೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ.ಯುದ್ಧ ಶುರುವಾಗಿದ್ದರಿಂದ ನಮಗೆ ಬಹಳಷ್ಟು ಹೆದರಿಕೆಯಾಗಿತ್ತು. ಬೆಳಿಗ್ಗೆ ದೂರವಾಣಿ ಮೂಲಕ ಮಾತಾಡಿದಾಗಲೇ ನಮಗೆ ಧೈರ್ಯ ಬಂದಿದ್ದು. ಮಗ ಯುದ್ಧ ನಡೆಯುವ ಜಾಗದಿಂದ ಸಾಕಷ್ಟು ದೂರದಲ್ಲಿದ್ದಾನೆ. ಅಲ್ಲಿನ ಸರಕಾರ ಕೂಡಾ ಕಾಳಜಿ ವಹಿಸಿದೆ ಎನ್ನುವ ಮಾತನ್ನು ಕೂಡಾ ಹೇಳಿದ್ದಾನೆ. ಇದರಿಂದ ನಮಗೆ ಧೈರ್ಯ ಬಂದಿದೆ.
– ಆಂದ್ರು ಫೌಲ್ (ಇಸ್ರೆಲ್‌ನಲ್ಲಿ ವಾಸಿಸುತ್ತಿರುವವನ ತಂದೆ)
- ಶಿರಸಿಯಿಂದ ಇಸ್ರೆಲ್ ನಲ್ಕಿ ಎಷ್ಟು ಜನರಿದ್ದಾರೆ ಎನ್ನುವ ಬಗ್ಗೆ ನಿಖರವಾದ ಮಾಹಿತಿ ಬಂದಿಲ್ಲ. ಮಾಹಿತಿ ಕಲೆ ಹಾಕುವ ಬಗ್ಗೆ ಎಲ್ಲಾ ಪ್ರಯತ್ನ ನಡೆದಿದೆ. ಅಲ್ಲಿ ಯಾರೇ ವಾಸವಾಗಿದ್ದರೂ ಎಲ್ಲರೂ ಚೆನ್ನಾಗಿದ್ದು, ಶಾಂತಿ ನೆಲಸಬೇಕೆನ್ನುವುದೇ ನಮ್ಮ ಆಶಯವಾಗಿದೆ.
– ಸಿರಿಲ್ ಡಿಸೋಜಾ (ಸೇಂಟ್ ಅಂಥೋನಿ ಚರ್ಚ್ ಫಾದರ್)