ಕುಮಟಾ: ತಾಲೂಕಿನ ಕಾಗಾಲ, ಬಾಡ ಹಾಗೂ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ವಸತಿ ಯೋಜನೆ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಕಾರ್ಯಾದೇಶ ಪತ್ರ ವಿತರಿಸಿದರು.
ತಾಲೂಕಿನ ಕಾಗಾಲಿನ ಪಂಚಾಯತದ ನೂತನ ಘನ ತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ ಹಾಗೂ ಬಾಡದ ಕಾಂಚಿಕಾ ಸಭಾಭವನದಲ್ಲಿ ಕಾರ್ಯಾದೇಶ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಗಾಲಿನ 22, ಬಾಡದ 25 ಹಾಗೂ ಹೊಲನಗದ್ದೆ ಪಂಚಾಯತ್ ವ್ಯಾಪ್ತಿಯ 33 ಸೇರಿದಂತೆ ಒಟ್ಟು 80 ಫಲಾನುಭವಿಗಳು ಕಾರ್ಯಾದೇಶ ಪತ್ರವನ್ನು ಪಡೆದರು.
ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ನನ್ನ ಕ್ಷೇತ್ರದ ಜನರೆಲ್ಲರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ನಿಟ್ಟಿನಲ್ಲಿ ನನ್ನ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬಡವರಿಗೆ ವಾಸಿಸಲು ಸೂಕ್ತ ಸೂರು, ಕುಡಿಯಲು ಶುದ್ಧ ನೀರು, ಆರೋಗ್ಯ, ಶಿಕ್ಷಣ ಹಾಗೂ ರಸ್ತೆ ಅಭಿವೃದ್ಧಿಗಾಗಿ ವಿಶೇಷ ಪ್ರಯತ್ನ ಮಾಡಿದ್ದೇನೆ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ ಅವರ ಸಹಕಾರದಿಂದ ನನ್ನ ಕ್ಷೇತ್ರಕ್ಕೆ ವಸತಿಯೋಜನೆಯಲ್ಲಿ ಎರಡು ಸಾವಿರ ಮನೆಗಳನ್ನು ತಂದಿದ್ದೇನೆ. ಕಾರಣಾಂತರಗಳಿಂದ ಆದೇಶ ಪತ್ರ ನೀಡಲು ಸ್ವಲ್ಪ ವಿಳಂಬವಾಗಿದೆ. ಆದರೆ ಅಷ್ಟು ಮನೆಗಳು ಫಲಾನುಭವಿಗಳಿಗೆ ಲಭ್ಯವಾಗಲಿದೆ. ಮನೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸುವ ಪೂರ್ವದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಸರ್ಕಾರದ ಆದೇಶದಂತೆ ಹಂತ ಹಂತವಾಗಿ ಮನೆ ನಿರ್ಮಿಸಿ ಸರ್ಕಾರದ ಸಹಾಯಧನ ಪಡೆಯಿರಿ ಎಂದು ತಿಳಿಸಿದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಸಾವಿತ್ರಿ ಪಟಗಾರ, ಎಮ್.ಎಮ್.ಹೆಗಡೆ, ಗೀತಾ ನಾಯ್ಕ್, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಮಹಾಂತೇಶ್ ಹರಿಕಂತ್ರ, ಮಂಜುನಾಥ್ ನಾಯ್ಕ್, ಮಾಜಿ ಅಧ್ಯಕ್ಷ ಶಶಿಕುಮಾರ್ ನಾಯ್ಕ್, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ ನಾಯಕ, ಎನ್‌ಆರ್‌ಎಲ್‌ಎಮ್ ಸಂಯೋಜಕ ಅಶ್ವಿನ್ ನಾಯ್ಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನವೀನ್ ನಾಯ್ಕ, ನಾಗರಾಜ್ ನಾಯ್ಕ್, ಕಮಲಾ ಹರಿಕಂತ್ರ ಹಾಗೂ ಕಾಗಾಲ, ಬಾಡ, ಹೊಲನಗದ್ದೆ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.