ಕಾರವಾರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಅಂಕೋಲಾ ಮತ್ತು ಕಾರವಾರ ತಾಲೂಕು ಹಾಗೂ ಜನಜಾಗ್ರತಿ ವೇದಿಕೆ ಸಹಯೋಗದಲ್ಲಿ ಹಬ್ಬುವಾಡದ ಗೌರಿಶಂಕರ ಸಭಾಭವನ ಸಭಾಂಗಣದಲ್ಲಿ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗ್ರತಿ ಕಾರ್ಯಕ್ರಮ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಸತೀಶ್ ಸೈಲ್ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ಭಾಗದಲ್ಲಿ ಉತ್ತಮ ರೀತಿಯ ಕೆಲಸವನ್ನ ಮಾಡುತ್ತಿದೆ. ನಾವು ಯಾವತ್ತೂ ಯೋಜನೆಗೆ ಸಹಕಾರ ನೀಡುತ್ತೇವೆ ಎಂದು ಹಾರೈಸಿದರು.
ಜಿಲ್ಲಾ ಜನಜಾಗ್ರತಿ ವೇದಿಕೆ ಅಧ್ಯಕ್ಷ ಮಹೇಶ ನಾಯ್ಕ ಅಧ್ಯಜ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ನಿರ್ದೇಶಕ ಬಾಬು ನಾಯ್ಕ ಉಪಸ್ಥಿತರಿದ್ದು ಗಾಂಧೀಜಿಯವರ ಕನಸು ನನಸಾಗಬೇಕಾದರೆ ಯಾವ ರೀತಿ ಬದುಕಬೇಕು ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ನವಜೀವನ ಸಮಿತಿಯ ಸದಸ್ಯರಿಗೆ ಗೌರವ ಸಮರ್ಪಣೆ ಮತ್ತು ಮಾಶಾಸನ ಮಂಜೂರಾತಿ ಪತ್ರ ವಿತರಣೆ ಹಾಗೂ ವಿಕಲಚೇತನರ ಸಾಮಗ್ರಿ ವಿತರಣೆ ಕಾರ್ಯಕ್ರಮವನ್ನು ಶಾಸಕರು ನಡೆಸಿಕೊಟ್ಟರು.
ಮಾಜಿ ಶಾಸಕ ಗಂಗಾಧರ ಭಟ್ ಗೌರವ ಉಪಸ್ಥಿತಿಯಲ್ಲಿ ಕೆ.ಆರ್.ನಾಯ್ಕ ಮತ್ತು ಕೃಷ್ಣ ಕಾಮತ್ ಹಾಗೂ ಅಂಕೋಲಾ ಯೋಜನಾಧಿಕಾರಿ ಶಶಿರೇಖಾ ಮತ್ತು ಕಾರವಾರ ಯೋಜನಾಧಿಕಾರಿ ವಿನಾಯಕ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ವಿಪತ್ತು ನಿರ್ವಹಣಾ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಎರಡೂ ತಾಲೂಕಿನ ಸೇವಾ ಪ್ರತಿನಿಧಿಗಳು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಮತ್ತು ಸ್ಥಳೀಯರು, ಸಂಘದ ಸದಸ್ಯರು, ಮೇಲ್ವಿಚಾರಕರು ಭಾಗವಹಿಸಿದ್ದರು.