ಅಂಕೋಲಾ: ಪಠ್ಯಕ್ರಮ ಚೌಕಟ್ಟಿನ ಆಧಾರದಲ್ಲಿ ಪಡೆದ ಶಿಕ್ಷಣದ ಜೊತೆಗೆ ಜೀವನ ರೂಪಿಸಿಕೊಳ್ಳುವ ಜ್ಞಾನವೂ ಅಗತ್ಯವಾಗಿದೆ. ಜ್ಞಾನ, ಕೌಶಲ್ಯ ಮತ್ತು ಅನುಭವಗಳು ವ್ಯಕ್ತಿಯ ಭವಿಷ್ಯದ ದಿನಗಳಿಗೆ ದೀವಿಗೆಯಾಗಿವೆ. ವಿದ್ಯಾರ್ಥಿಗಳಿಗೆ ಅಂತ ಜ್ಞಾನ ಹಂಚುವುದು ಸತ್ಕಾರ್ಯವೆಂಬ ತೃಪ್ತಿಯಿದೆ ಎಂದು ಕಲ್ಪವೃಕ್ಷ ಸಂಸ್ಥೆಯ ನಿರ್ದೇಶಕ ಮಾರುತಿ ಹರಿಕಂತ್ರ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸತತ ಮೂರು ವರ್ಷಗಳಿಂದ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸುತ್ತಾ ಬಂದಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಇರುವ ಗೊಂದಲ ಮತ್ತು ಅವಶ್ಯಕ ಸಿದ್ಧತೆಗಳ ಕುರಿತು ಮಾಹಿತಿ ನೀಡುವುದೇ ಕಾರ್ಯಾಗಾರದ ಉದ್ದೇಶವಾಗಿದೆ. ತರಬೇತಿಯ ನೆಪದಲ್ಲಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕಾರ್ಯ ಇಂದು ನಡೆಯುತ್ತಿರುವುದು ವಿಷಾದಕರ ಎಂದರು.
ಸಂಸ್ಥೆಯ ಹಿರಿಯ ತರಬೇತುದಾರ ರವಿ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಅಭ್ಯುದಯವೇ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಸ್ನಾತಕೋತ್ತರ ಪದವಿ ಪಡೆದ 6 ಖಾಯಂ ಉಪನ್ಯಾಸಕರನ್ನು ಹೊಂದಿರುವುದು ವಿಶೇಷವಾಗಿದೆ. ನಿಗದಿತ ಸಮಯಕ್ಕೆ ಪೂರ್ಣ ಪಠ್ಯಕ್ರಮ ಮುಗಿಸುವ ಕಾರಣದಿಂದ ವಿದ್ಯಾರ್ಥಿಗಳು ಮೆಚ್ಚಿಕೊಂಡಿದ್ದಾರೆ. ಆದಾಗ್ಯೂ ಒಂದು ವಾರ ಉಚಿತ ತರಬೇತಿ ನೀಡುವುದು ಅಭಿನಂದನಾರ್ಹ ಎಂದರು.
ಕಾರ್ಯಾಗಾರದ ಕುರಿತು ಸ್ಪರ್ಧಾರ್ಥಿಗಳು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಸುಲಕ್ಷಾ ನಾಯ್ಕ, ಜ್ಯೋತಿ ಗೌಡ, ಗೀತಾ ಎ., ಅನಿತಾ ಎಸ್., ಶರಣು ಉಪ್ಪಾರ ಮತ್ತು ವಿದ್ಯಾರ್ಥಿಗಳು ಇದ್ದರು.