ಹೊನ್ನಾವರ: ಕೊಂಕಣ ಖಾರ್ವಿ ಸಮಾಜದ ವತಿಯಿಂದ ವಿದ್ಯಾನಿಧಿ ಯೋಜನೆ ಅಡಿ ಖಾರ್ವಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀಜಯದೇವ ಇನ್‌ಸ್ಟಿಟ್ಯೂಟ್‌ನ ಕನ್ಸಲ್ವೆಂಟ್ ಇನ್ ಕಾರ್ಡಿಯಾಕ್ ಇಲೆಕ್ಟ್ರೋಫಿಸಿಯೋಲೋಜಿಸ್ಟ್ ಡಾ.ಭರತರಾಜ ಬಾನಾವಳಿಕರ್ ಮಾತನಾಡಿ, ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿರುವ ಸಂಘಟಕರ ಕಾರ್ಯ ಶ್ಲಾಘನೀಯ. ಇದರಿಂದ ಇನ್ನಷ್ಟು ಪ್ರತಿಭೆಗಳಿಗೆ ಪ್ರೇರಣೆಯಾಗುತ್ತದೆ ಎಂದರು.
ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿರುವಾಗಲೇ ಮುಂದಿನ ಶೈಕ್ಷಣಿಕ ಹಂತದ ಬಗ್ಗೆ ನಿರ್ಧರಿಸಿರಬೇಕು. ಓದಿನ ಜೊತೆಗೆ ಪೂರ್ವ ತಯಾರಿ ಅಗತ್ಯವಾಗಿರುತ್ತದೆ. ಪ್ರತಿಯೊಬ್ಬರಲ್ಲು ಸ್ವಸಾಮರ್ಥ್ಯವಿರಬೇಕು. ಶಾಲಾ ಹಂತದಲ್ಲಿನ ಚಿಕ್ಕ ಸಾಧನೆಗೆಳು ಮುಂದಿನ ದೊಡ್ಡ ಸಾಧನೆಗೆ ಪ್ರೇರಣೆ ಆಗುತ್ತದೆ. ವಿಷಯದ ಮೇಲಿನ ಕೂತೂಹಲತೆ ಇರಬೇಕು.ಇಂದಿನ ಅಂತರ್ಜಾಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ ಎಂದು ಕಿವಿಮಾತು ಹೇಳಿದರು.
ಓದಿನಲ್ಲಿ ಜಯಶಾಲಿಯಾಗಿ ಸಾಧನೆ ಹಂತ ತಲುಪಿದಾಗ ನಾವು ಹಣದ ಹಿಂದೆ ಹೋಗಬೇಕಿಲ್ಲ,ಹಣವೇ ನಮ್ಮನ್ನರಸಿ ಬರುತ್ತದೆ. ದೇಶಕ್ಕೆ ನಮ್ಮ ಕೊಡುಗೆ ಎನು ಎಂಬುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ನಮ್ಮಲ್ಲಿರುವ ಶಕ್ತಿ ಸಾಮರ್ಥ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಎಸ್‌ಡಿಎಮ್ ಕಾಲೇಜಿನ ಉಪನ್ಯಾಸಕಿ ಕಾವೇರಿ ಮೇಸ್ತ ಮಾತನಾಡಿ, ಅಂಕ ಗಳಿಕೆ ಕಡಿಮೆ ಅಥವಾ ಹೆಚ್ಚು ಎನ್ನುವ ವಿಚಾರದಲ್ಲಿ ನಿಮ್ಮನ್ನು ನೀವು ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಡಿ. ತಂದೆ- ತಾಯಿಯನ್ನು ಗೌರವಿಸಿ.ಸರಿ ಇದ್ದದನ್ನು ಸರಿ ಎನ್ನಬೇಕು. ತಪ್ಪಿದ್ದಾಗ ಅದನ್ನು ಬೆಂಬಲಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ 11, ಪಿಯುಸಿಯಲ್ಲಿನ 17, ಪದವಿ ವ್ಯಾಸಂಗದಲ್ಲಿನ 5 ಒಟ್ಟು 33 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು 1.60 ಲಕ್ಷ ಪ್ರೋತ್ಸಾಹಧನ ನೀಡಿ ಸನ್ಮಾನಿಸಿ ಪುರಸ್ಕರಿಸಿದರು. ವಿದ್ಯಾನಿಧಿ ಯೋಜನೆಗೆ ಆರ್ಥಿಕ ಸಹಾಯಧನ ನೀಡಿದ ದಾನಿಗಳಿಗೆ ಪುಷ್ಪ ನೀಡಿ ಅಭಿನಂದಿಸಿದರು. ಸನ್ಮಾನಿತ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಸೂರ್ಯಕಾಂತ ಸಾರಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊಂಕಣ ಖಾರ್ವಿ ಸಮಾಜದ ಗೌರವಾಧ್ಯಕ್ಷ ಎಎನ್ ಮೇಸ್ತ, ಕಾರ್ಯದರ್ಶಿ ಸಂದೀಪ ತಾಂಡೇಲ್ ಉಪಸ್ಥಿತರಿದ್ದರು. ಖಾರ್ವಿ ಸಮಾಜದ ಮುಖಂಡರುಗಳು, ಸಾಧಕ ವಿದ್ಯಾರ್ಥಿಗಳ ಪಾಲಕ- ಪೋಷಕರು ಪಾಲ್ಗೊಂಡಿದ್ದರು.