ಜೊಯಿಡಾ: ತಾಲೂಕಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ತಾಲೂಕಾ ಆಸ್ಪತ್ರೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ತಾಲೂಕಾ ವೈದ್ಯಾಧಿಕಾರಿ ವಿಜಯಕುಮಾರ ಕೊಚರಗಿ ಉದ್ಘಾಟಿಸಿ ಮಾತನಾಡಿ, ಇಂದಿನ ಯುವಕರು ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವ ಇನ್ನೊಬ್ಬರ ಜೀವ ಕಾಪಾಡಬಹುದಾಗಿದೆ. ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿವರ್ಷ ರಕ್ತದಾನ ಮಾಡುತ್ತ ಬಂದಿರುವ ಮಂಜುನಾಥ ಶೆಟ್ಟಿ, ರೂಪೇಶ ಚೌಗುಲೆ ಅವರಿಗೆ ಸನ್ಮಾನಿಸಲಾಯಿತು. ಪಿಎಸ್‌ಐ ಮಹೇಶ ಮಾಳಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಕಾಂಗ್ರೆಸ್‌ನ ಕಿಸಾನ್ ಘಟಕದ ರವಿ ರೇಡ್ಕರ್, ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಡಿ., ಆರೋಗ್ಯ ಇಲಾಖೆಯ ವಾಸುದೇವ ಕಿತ್ತೂರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.