ಭಟ್ಕಳ: ತಾಲ್ಲೂಕಿನ ಗ್ರಾಮೀಣ ಜನರು ಅಲ್ಪಸ್ವಲ್ಪ ಕೃಷಿ ಹಾಗೂ ಮಾಲ್ಕಿ ಭೂಮಿ ಹೊಂದಿರುವ ಕಾರಣದಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಲಭ್ಯವಿರುವ ದನದ ಕೊಟ್ಟಿಗೆ, ಅಡಿಕೆ, ಮಲ್ಲಿಗೆ, ಗುಲಾಬಿ, ಡ್ಯ್ರಾಗನ್ ಪ್ರೂಟ್ ತೋಟ, ಕುರಿ, ಮೇಕೆ ಹಾಗೂ ಕೋಳಿ ಶೆಡ್ ನಿರ್ಮಾಣದಂತ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಸದೃಢರಾಗಲು ಅವಕಾಶವಿದೆ ಎಂದು ತಾಲ್ಲೂಕು ಪಂಚಾಯತ್‌ನ ಪ್ರಭಾರ ಸಹಾಯಕ ನಿರ್ದೇಶಕರು ಹಾಗೂ ಬೇಂಗ್ರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉದಯ ಬೋರ್ಕರ್ ಹೇಳಿದರು.
ಅವರು ತಾಲ್ಲೂಕಿನ ಬೇಂಗ್ರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವಿನತೊಳ, ಹೆದ್ದಾರಿ ಮನೆ, ಗೊಂಚಿಹಿತ್ತಲು, ಕೋಕ್ತಿ, ಮಾಲೆಕೊಡ್ಲು ಹಾಗೂ ಪಡುಶಿರಾಲಿ ಮಜಿರೆಯಲ್ಲಿ ನಡೆದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡಿಗೆ ಅಭಿಯಾನ, ಮನೆ-ಮನೆ ಭೇಟಿ, ರೈತರ ಸಮೀಕ್ಷೆ ಕಾರ್ಯಕ್ರಮ ನಡೆಸುವ ಮೂಲಕ ಈವರೆಗೂ ಉದ್ಯೋಗ ಚೀಟಿ ಪಡೆದುಕೊಳ್ಳದ ರೈತರಿಗೆ ಉದ್ಯೋಗ ಚೀಟಿ ವಿತರಣೆ ಹಾಗೂ ವೈಯಕ್ತಿಕ ಹಾಗೂ ಕೂಲಿ ಕೆಲಸದ ಬೇಡಿ ಸಂಗ್ರಹಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆ ಹಾಗೂ ಜಲ ಸಂಜೀವಿನಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಮನೆ-ಮನೆ ಭೇಟಿ ಜಾಥಾ, ರೈತರ ಸಮೀಕ್ಷೆ ನಡೆಸಿ ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿ ಬೇಡಿಕೆ ಸಂಗ್ರಹಿಸಲಾಗುತ್ತಿದ್ದು, ತಾಲ್ಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನ.15ರವರೆಗೆ ಜರುಗಲಿರುವ ವಾರ್ಡ್ ಸಭೆ ಹಾಗೂ ನ.31ರವರೆಗೆ ಜರುಗಲಿರುವ ಗ್ರಾಮ ಸಭೆಗಳಲ್ಲಿ ಸಾರ್ವಜನಿಕರು ಪಾಲ್ಗೊಂಡು ತಮ್ಮ ಬೇಡಿಕೆ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲಾ ಐಇಸಿ ಸಂಯೋಜಕ ಫಕೀರಪ್ಪ ತುಮ್ಮಣ್ಣನವರ, ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ದೇಶ, ನರೇಗಾದಡಿ ಲಭ್ಯವಿರುವ ಕೂಲಿ ಕೆಲಸ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳು, ವಿಶೇಷ ಚೇತನರು, 60 ವರ್ಷ ಮೇಲ್ಪಟ್ಟ ಹಿರಿಯನಾಗರಿಕರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಗರ್ಭಿಣಿ-ಬಾಣಂತಿಯರಿಗೆ ನರೇಗಾ ಕೆಲಸದ ಸಂದರ್ಭದಲ್ಲಿ ಸಿಗುವ ಶೇ 50ರಷ್ಟು ರಿಯಾಯಿತಿ, ಸೌಲಭ್ಯಗಳ ಕುರಿತು ತಿಳಿಸಿದರು.
ಇದೇವೇಳೆ ಗ್ರಾ.ಪಂ ವ್ಯಾಪ್ತಿಯಲ್ಲಿ ಈವರೆಗೂ ನರೇಗಾ ಉದ್ಯೋಗ ಚೀಟಿ ಪಡೆಯದ ರೈತರಿಗೆ ಗುರುತಿಸಿ ಹೊಸದಾಗಿ ಉದ್ಯೋಗ ಚೀಟಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಎಂಜಿನಿಯರ್ ಲಕ್ಷ್ಮೀ ನಾಯ್ಕ, ಬಿಎಫ್‌ಟಿ ಪುಷ್ಪಾನಾಯ್ಕ್, ಡಿಇಒ ಯೋಗೇಶ ನಾಯ್ಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.