ಭಟ್ಕಳ: ಇಂದಿನ ಕಾಲದಲ್ಲಿ ಬಿಟ್ಟಿ ದುಡ್ಡು ಅಥವಾ ಬೆಲೆ ಬಾಳುವ ವಸ್ತುಗಳು ಸಿಕ್ಕಿತೆಂದರೆ ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ಅಂಥದ್ದರಲ್ಲಿ ಇಲ್ಲೊಬ್ಬ ಆಟೋ ಡ್ರೈವರ್ ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಚಿನ್ನಾಭರಣ ಹಾಗೂ ನಗದನ್ನು ಮಹಿಳೆಗೆ ವಾಪಸ್ ನೀಡುವ ಮೂಲಕ ಮುರುಡೇಶ್ವರದ ಆಟೋ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕ ಕಾರ್ಯಕ್ಕೆ ಮೆಚ್ಚಿ ಪೊಲೀಸರು ಸನ್ಮಾನ ಮಾಡಿದ್ದಾರೆ.
ಚಿನ್ನಾಭರಣ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಚಂದ್ರು ನಾಯ್ಕ ತಾಲೂಕಿನ ಶಿರಾಣಿ ನಿವಾಸಿಯಾಗಿದ್ದಾನೆ. ಈತ ಬಸ್ತಿ ಕಾಯ್ಕಿಣಿಯ ದೇವಿಕಾನನಿಂದ ವಿಜಯಲಕ್ಷ್ಮಿ ಎಂಬ ಮಹಿಳೆಯನ್ನು ಆಕೆಯ ಗಂಡನ ಮನೆಯಿಂದ ತೆಂಗಿನಗುಂಡಿಯಲ್ಲಿರುವ ತಾಯಿಯ ಮನೆಗೆ ಬಾಡಿಗೆ ಬಿಟ್ಟು ಬರುವ ವೇಳೆ ಮಹಿಳೆ ತನ್ನ ಚಿನ್ನಾಭರಣವುಳ್ಳ ಬ್ಯಾಗ್‌ನ್ನು ಆಟೋ ಹಿಂಭಾಗದಲ್ಲಿ ಬಿಟ್ಟು ತೆರಳಿದ್ದಾಳೆ. ಆಟೋ ಚಾಲಕ ಮರಳಿ ಮುರುಡೇಶ್ವರ ಕಡೆಗೆ ಹೋಗುವ ವೇಳೆಯಲ್ಲಿ ಖಾಲಿ ಹೋಗುವ ಬದಲು ಮೂರ್ನಾಲ್ಕು ಪ್ರಯಾಣಿಕರನ್ನು ಕರೆದುಕೊಂಡು ಬಂದಿದ್ದಾರೆ.
ಪ್ರಯಾಣಿಕರನ್ನು ಬಿಟ್ಟು ಆಟೋ ಚಾಲಕ ನೇರವಾಗಿ ಮುರುಡೇಶ್ವಕ್ಕೆ ಬಂದಾಗ ತನ್ನ ಆಟೋ ಹಿಂಭಾಗದಲ್ಲಿ ಒಂದು ಬ್ಯಾಗ್ ಇರುವುದನ್ನು ಗಮನಿಸಿ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅದರಲ್ಲಿ 5ರಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 9,775 ರೂ. ನಗದು ಇರುವುದು ತಿಳಿದಾಗ ತಕ್ಷಣ ಆಟೋ ಚಾಲಕ ಸಂಘದ ಪ್ರಮುಖರಿಗೆ ಮಾಹಿತಿ ತಿಳಿಸಿದ್ದಾನೆ. ಅಷ್ಟರಲ್ಲಾಗಲೇ ಮಹಿಳೆ ತಾನು ಆಟೋದಲ್ಲಿ ಚಿನ್ನಾಭರಣವುಳ್ಳ ಬ್ಯಾಗ್ ಕಳೆದುಕೊಂಡಿರುವುದು ನೆನಪಾಗಿ ತನ್ನ ಸಂಬಂಧಿ ಆಟೋ ಚಾಲಕರಿಗೆ ಮಾಹಿತಿ ತಿಳಿಸಿದ್ದಾರೆ. ಇದರಿಂದಾಗಿ ಚಿನ್ನಾಭರಣ ಕಳೆದುಕೊಂಡ ಮಹಿಳೆ ಪತ್ತೆಯಾಗಿದ್ದಾಳೆ.
ಬಳಿಕ ಮಹಿಳೆಗೆ ಮುರುಡೇಶ್ವರ ಪೊಲೀಸ್ ಠಾಣೆಗೆ ಬರಲು ಮಾಹಿತಿ ನೀಡಿದ್ದಾರೆ. ಠಾಣೆಗೆ ಬಂದು ಮಹಿಳೆ ಪೊಲೀಸರ ಮುಖಾಂತರ ತನ್ನ ಚಿನ್ನಾಭರಣ ತೆಗೆದುಕೊಂಡು ಆಟೋ ಚಾಲಕನಿಗೆ ಧನ್ಯವಾದ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮುರುಡೇಶ್ವರ ಪೋಲಿಸ ಠಾಣೆ ವತಿಯಿಂದ ಆಟೋ ಚಾಲಕನಿಗೆ ಸನ್ಮಾನಿಸಿ ಗೌರವಿಸಲಾಯಿತು. ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘ ಮಾವಳ್ಳಿ, ಮುರ್ಡೇಶ್ವರದ ವತಿಯಿಂದ ಕೂಡ ಆಟೋ ಚಾಲಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ.