ಕಾರವಾರ: ಅರಣ್ಯ ಇಲಾಖೆಯಲ್ಲಿ ಸುಧೀರ್ಘ 36 ವರ್ಷಗಳ ಸೇವೆ ಸಲ್ಲಿಸಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ ರಂಜನ್ ಸೇವೆಯಿಂದ ವಯೋನಿವೃತ್ತರಾಗಿದ್ದು, ಅವರ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮೂಲತಃ ಉತ್ತರ ಪ್ರದೇಶ ರಾಜ್ಯದವರಾಗಿದ್ದು, 1987ನೇ ಬ್ಯಾಚಿನಲ್ಲಿ ಭಾರತೀಯ ಅರಣ್ಯ ಸೇವೆಗೆ ಸೇರಿರುತ್ತಾರೆ. ಎರಡು ವರ್ಷಗಳ ತರಬೇತಿ ನಂತರ ಕರ್ನಾಟಕ ಕೆಡೆರನಲ್ಲಿ ಪ್ರೋಬೆಷನರಿ ಅವಧಿಯನ್ನು ಮಂಗಳೂರಿನಲ್ಲಿ ನಿರ್ವಹಿಸಿ, ಸಾಮಾಜಿಕ ಅರಣ್ಯ ವಿಭಾಗ ಕಾರವಾರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮೊದಲು ನೇಮಕಗೊಂಡಿದ್ದು, ಕಾರವಾರ ವಿಭಾಗದಲ್ಲಿಯೇ ಬೀಳ್ಕೊಡುಗೆ ನಡೆಯಿತು.
ಇಲಾಖೆಯ ಅನೇಕ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿ, ವಿಜಯಪುರ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಜಲಾನಯನ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿರುತ್ತಾರೆ. ಅರಣ್ಯ ಸಂರಕ್ಷಣೆ, ಅರಣ್ಯ ಅಭಿವೃದ್ಧಿ ಮತ್ತು ವನ್ಯಜೀವಿ ವಿಭಾಗದಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸಿರರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆಯ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.ಅವರ ಧರ್ಮ ಪತ್ನಿ ಪೂನಂ ಸಮೇತರಾಗಿ ಸನ್ಮಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕೆನರಾವೃತ್ತ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ, ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತಕುಮಾರ್ ಕೆ.ಸಿ., ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಇತರರು ಇದ್ದರು.