ಕಾರವಾರ: ಜಿಲ್ಲೆಯಲ್ಲಿ ಅ.9ರಿಂದ 14ರವರೆಗೆ ಆಯೋಜಿಸಿರುವ ಮೂರನೇ ಸುತ್ತಿನ ಮಿಷನ್ ಇಂದ್ರ ಧನುಷ್ 5.0 ಲಸಿಕಾ ಅಭಿಯಾನವನ್ನು ಪ್ರತಿ ಶತ 100ರಷ್ಟು ಸಂಪೂರ್ಣ ಯಶಸ್ವಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.
ಜಿಲ್ಲಾ ಮಟ್ಟದ ಲಸಿಕೆ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದ್ರಧನುಷ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಲಸಿಕಾ ವೇಳಾಪಟ್ಟಿಯನ್ವಯ 0-5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ನಿಗಧಿತ ಅವಧಿಯಲ್ಲಿ ನೀಡಬೇಕಾದ ಎಲ್ಲಾ ಲಸಿಕೆಗಳನ್ನು ತಪ್ಪದೇ ನೀಡುವಂತೆ ಹಾಗೂ ಜಿಲ್ಲೆಯ ಯಾವುದೇ ಗರ್ಭಿಣಿ ಮತ್ತು ಮಗು ಲಸಿಕೆಯಿಂದ ವಂಚಿತರಾಗದಂತೆ ಹಾಗೂ ಈಗಾಗಲೇ ಲಸಿಕೆ ವಂಚಿತರಾಗಿರುವವರನ್ನು ಗುರುತಿಸಿ ಲಸಿಕೆ ನೀಡಿ, ಯಾವುದೇ ರೋಗಗಳಿಗೆ ತುತ್ತಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು.
ಗರ್ಭಿಣಿಯರು ಮತ್ತು ಮಕ್ಕಳಲ್ಲಿ ವಿಶೇಷವಾಗಿ ರುಬೆಲ್ಲಾ ಲಸಿಕೆಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಲಸಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ. ಜೋಯಿಡಾ, ಯಲ್ಲಾಪುರ, ಶಿರಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯುವಂತೆ ಅರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯವರು ಜಂಟಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ಮಿಷನ್ ಇಂದ್ರ ಧನುಷ್ ಕಾರ್ಯಕ್ರಮದ ಮೂಲಕ ದಡಾರ ರೂಬೆಲ್ಲಾ ರೋಗದಿಂದ ಮಕ್ಕಳಿಗೆ ಹಾನಿಯಾಗುವುದನ್ನು ತಪ್ಪಿಸಲು ಮತ್ತು ಸಾರ್ವತ್ರಿಕ ಲಸಿಕೆಯಲ್ಲಿ ಇತ್ತೀಚೆಗೆ ಸೇರ್ಪಡೆಗೊಂಡ ಪಿವಿಸಿ ಲಸಿಕೆ, ಡಿಪಿಟಿ ಬೂಸ್ಟರ್ ಡೋಸ್, ಓಪಿವಿ ಬೂಸ್ಟರ್ ಡೋಸ್ ಸೇರಿದಂತೆ ಮಾರಕ ರೋಗಗಳಿಂದ ಮಕ್ಕಳು ಮತ್ತು ಗರ್ಭಿಣಿಯರನ್ನು ರಕ್ಷಿಸಲು ಉದ್ದೇಶಿಸಿದ್ದು, ಸಾರ್ವಜನಿಕರು ತಮ್ಮ ಮಕ್ಕಳಿಗೆ ಈ ಅಗತ್ಯ ಲಸಿಕೆಗಳನ್ನು ತಪ್ಪದೇ ಕೊಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದವರ ಅಂಕಿ ಅಂಶ ಪಡೆದುಕೊಳ್ಳಿ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಮಕ್ಕಳು ಲಸಿಕೆಯನ್ನು ಪಡೆದಕೊಂಡಿರುವ ಬಗ್ಗೆ ಪೋಷಕರ ಗಮನಕ್ಕೆ ತರಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ವಿ.ನೀರಜ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹರ್ಷ, ತಾಲ್ಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.