ಜೊಯಿಡಾ: ಕೇಂದ್ರ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ನೀಡುವ ಮಾರ್ಗದರ್ಶನದಂತೆ ಸಂಬಂಧಪಟ್ಟ ಇಲಾಖೆಗಳು ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ. ಅದರಂತೆ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ನಂದಿಗದ್ದಾ ಗ್ರಾ.ಪಂ ಅಧ್ಯಕ್ಷ ಅರುಣ ದೇಸಾಯಿ ಹೇಳಿದರು.
ಅವರು ತಾಲೂಕಿನ ಗುಂದ ಪ್ರೌಢಶಾಲೆಯಲ್ಲಿ ನಡೆದ ಸಂಕಲ್ಪ ಸಪ್ತಾಹವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟ ವಿವಿಧ ಕ್ಷೇತ್ರಗಳ ಮಾಹಿತಿ ಪಡೆಯುವ ಮೂಲಕ ಉತ್ತಮ ವಿದ್ಯಾರ್ಥಿ ಜೀವನವನ್ನು ಸಾಫಲ್ಯಗೊಳಿಸಿಕೊಳ್ಳಲು ಕರೆ ನೀಡಿದರು.
ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜೋಸೆಫ್ ಗೊಂಸಲ್ವೆಸ್ ಮಾತನಾಡಿ, ಸಂಕಲ್ಪ ಸಪ್ತಾಹದ ಉದ್ದೇಶಗಳನ್ನು ವಿವರಿಸಿದರು. ಗ್ರಾ.ಪಂ ಸದಸ್ಯ ಧವಳೊ ಸಾರವಕರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಧನೆಯತ್ತ ಗಮನವಿರಬೇಕು ಜಗತ್ತಿನ ಹಲವಾರು ಕ್ರೀಡೆಗಳಲ್ಲಿ ಗೆದ್ದ ಬಹುತೇಕರು ಗ್ರಾಮೀಣ ಭಾಗದಿಂದ ಬಂದವರಾಗಿದ್ದು ಉತ್ತಮ ಸಾಧನೆ ಮಾಡಿರುತ್ತಾರೆ. ನೀವು ಸಾಧನೆ ಮಾಡಿ ಹೆಸರು ಮಾಡಿಕೊಳ್ಳಿ ಎಂದು ಮಕ್ಕಳಿಗೆ ಕರೆ ನೀಡಿದರು.
ವಿವಿಧ ಸ್ಪರ್ಧೆ ಕ್ರೀಡೆಗಳಲ್ಲಿ ಭಾಗವಹಿಸಿ ಗೆದ್ದು ಬಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢ ಶಾಲೆಯ ಅಧ್ಯಕ್ಷ ಅನಂತ ದೇಸಾಯಿ ಮಾತನಾಡಿ ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು ಅದನ್ನು ಸದ್ವಿನಿಯೋಗ ಮಾಡಿಕೊಳ್ಳಿ ನೀವು ಕಲಿತ ಶಾಲೆಗೆ ತಾಲೂಕಿಗೆ ಹೆಸರು ತನ್ನಿ ಆ ಮೂಲಕ ಕಲಿಸಿದ ಗುರುಗಳಿಗೆ ಗೌರವ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಪ್ರೌಡ ಶಾಲೆಯ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಆಕಾಶ ಎಲ್ಲೇಕರ್ಗೆ ನೀಡಲಾಯಿತು. ಗ್ರಾಪಂ ಉಪಾಧ್ಯಕ್ಷೆ ದಾಕ್ಷಾಯಿಣಿ ದಾನಶೂರ ಎಸ್ಡಿಎಂಸಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕರಾದ ಪಕೀರಪ್ಪ ದರಿಗೊಂಡ ಮತ್ತು ಗೋಕುಲ್ ಸ್ಥಳೇಕರ್ ಕಾರ್ಯಕ್ರಮ ನಡೆಸಿಕೊಟ್ಟರು.