ಅ0ಕೋಲಾ: ಇತ್ತೀಚಿಗೆ ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಖೋ-ಖೋ ಸ್ಪರ್ಧೆಯಲ್ಲಿ ಅತ್ಯಾಕರ್ಷಕ ಪ್ರದರ್ಶನ ನೀಡಿದ ತಾಲೂಕಿನ ಅವರ್ಸಾ ಗಂಡು ಮಕ್ಕಳ ಶಾಲೆಯ ತಂಡ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಶಾಲೆ, ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದೆ.
ಅವರ್ಸಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದ 400, 600, 200 ಮೀ. ಓಟದಲ್ಲಿ ಪ್ರಥಮ ಮತ್ತು ದ್ವಿತೀಯ, ಉದ್ದ ಜಿಗಿತದಲ್ಲಿ ದ್ವಿತೀಯ, ಚಕ್ರ ಎಸೆತ ದ್ವಿತೀಯ, 80 ಮೀ. ಹರ್ಡಲ್ಸ್ ದ್ವಿತೀಯ, 200 ಮೀ. ಓಟದಲ್ಲಿ ತೃತೀಯ, ಗುಂಪು ಆಟಗಳಲ್ಲಿ ರೀಲೆ, ಥ್ರೋಬಾಲ್, ಖೋ- ಖೋ ಆಟಗಳಲ್ಲಿ ಪ್ರಥಮ ಸ್ಥಾನ ವಿಜಯ ಸಾಧಿಸಿ ವೈಯಕ್ತಿಕ ವೀರಾಗ್ರಣಿ ಹಾಗೂ ವೀರಾಗ್ರಣಿ ಶಾಲೆಯಾಗಿ ಹೊರಹೊಮ್ಮಿತ್ತು. ಅದೇ ರೀತಿ ವಿಜೇತರಾದ ಕ್ರೀಡಾಪಟುಗಳು ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯಕ್ತಿಕ ವಿಭಾಗದಲ್ಲಿ 200 ಮೀ. ಓಟ ಪ್ರಥಮ, 400 ಮೀ. ಓಟ ತೃತೀಯ ಹಾಗೂ ಹಾಗೂ ಗುಂಪು ಆಟಗಳಲ್ಲಿ ಖೋ- ಖೋ ಆಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.
ಇವರನ್ನು ಶಾಲೆಯ ಮುಖ್ಯಾಧ್ಯಾಪಕರು, ಸಹ ಶಿಕ್ಷಕರು, ಎಸ್ಡಿಎಂಸಿಯವರು, ಪಾಲಕರು, ಊರ ನಾಗರಿಕರು, ಶತಮಾನೋತ್ಸವ ಸಮಿತಿಯವರು, ಹಳೆಯ ವಿದ್ಯಾರ್ಥಿಗಳು ಹಾಗೆಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕ ದೈಹಿಕ ಪರಿವೀಕ್ಷಕರು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಸಿಆರ್ಪಿ, ನಿವೃತ್ತ ಶಿಕ್ಷಕಿ ನಯನಾ ನಾಯಕರವರು ಪ್ರೋತ್ಸಾಹಿಸಿ ಅಭಿನಂದಿಸಿದ್ದಾರೆ.