ಶಿರಸಿ: ಇಲ್ಲಿನ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನೀಡುವ ನಮ್ಮನೆ ಪ್ರಶಸ್ತಿಗೆ ನಾಡಿನಲ್ಲಿ ಅಕ್ಕಿ ಡಾಕ್ಟರ್ ಎಂದೇ ಹೆಸರಾದ ದೊಡ್ಡಬಳ್ಳಾಪುರದ ಡಾ. ಶಶಿಕುಮಾರ ತಿಮ್ಮಯ್ಯ, ಯಕ್ಷಗಾನದ ಸವ್ಯಸಾಚಿ ಕಲಾವಿದ ನಾಗೇಂದ್ರ ಭಟ್ಟ ಮುರೂರು, ನಮ್ಮನೆ ಕಿಶೋರ ಪುರಸ್ಕಾರಕ್ಕೆ ಯಕ್ಷಗಾನದ ಹಿಮ್ಮೇಳದ ಪ್ರತಿಭೆ ಶ್ರೀವತ್ಸ ಗುಡ್ಡೆದಿಂಬ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ ಹನ್ನೆರಡು ವರ್ಷಗಳಿಂದ ನಮ್ಮನೆ ಹಬ್ಬದಲ್ಲಿ ನೀಡಲಾಗುತ್ತಿರುವ ನಮ್ಮನೆ ಪ್ರಶಸ್ತಿಗೆ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಸಮಿತಿ ಯಾರಿಂದಲೂ ಅರ್ಜಿ ಪಡೆಯದೇ ಆಯ್ಕೆ ಮಾಡಿದೆ. ಇಬ್ಬರು ಬೇರೆ ಬೇರೆ ಕ್ಷೇತ್ರದ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಓರ್ವ ಕಿಶೋರ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ.
ಮೂಲತಃ ಕೋಲಾರದ ಬಂಗಾರಪೇಟೆಯ ಡಾ. ಶಶಿಕುಮಾರ ತಿಮ್ಮಯ್ಯ ಅವರು ಸರಕಾರಿ ನೌಕರಿ ಬಿಟ್ಟು, ಕಳೆದ ಒಂದು ದಶಕಗಳಿಂದ ಸಂಸ್ಕರಣಾ ವಿಭಾಗದಲ್ಲಿ ಡಿಜಿಟಲ್ ತಂತ್ರಜ್ಞಾನದ ಜೊತೆಗೆ ಇಂಜನೀಯರಿಂಗ್ ಜೋಡಿಸಿ ಇಂದು ಕೋಯ್ಲಾದ ಭತ್ತವನ್ನೂ ಹಳೆ ಭತ್ತವಾಗಿಸುವ ತಂತ್ರಜ್ಞಾನದ ಮೂಲಕ ಜಗತ್ತಿನ ಅನ್ನದ ಬಟ್ಟಲಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.
2016 ರಲ್ಲಿ ಕೇವಲ ನಾಲ್ಕು ಜನರಿಂದ ಆರಂಭಗೊಂಡ ಸಂಸ್ಥೆಯಲ್ಲಿ ಇಂದು ಎಂಟು ನೂರಕ್ಕೂ ಅಧಿಕ ಜನರು ಉದ್ಯೋಗ ಪಡೆದಿದ್ದು, 40ಕ್ಕೂ ಅಧಿಕ ದೇಶದಲ್ಲಿ ಇವರ ಸಂಸ್ಥೆ ಗುರುತಾಗಿದೆ. ಅನ್ನದ ಕ್ಷೇತ್ರ ಕಡಿಮೆ ಆಗುತ್ತಿರುವ ಕಾಲದಲ್ಲಿ ಅದೇ ಕ್ಷೇತ್ರದಲ್ಲಿ ಅನನ್ಯ ಕಾರ್ಯ ಮಾಡುತ್ತಿರುವ ಶಶಿಕುಮಾರ ಅವರಿಗೆ ವಿಜಯರತ್ನ, ಬಿಸನೆಸ್ ಎಕ್ಸಲೆನ್ಸ ಸೇರಿದಂತೆ ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳೂ ಅರಸಿ ಬಂದಿದೆ. ಕೃಷ್ಣಮ್ಮ ಸೇವಾ ಟ್ರಸ್ಟ್ ಮೂಲಕ ಸಾಮಾಜಮುಖಿ ಕಾರ್ಯವನ್ನೂ ಮಾಡುತ್ತಿದ್ದಾರೆ. ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ತಮ್ಮದೇ ಕೊಡುಗೆ ನೀಡುತ್ತಿದ್ದು, ತಮ್ಮ ಉದ್ಯೋಗದ ಕ್ಷೇತ್ರದಲ್ಲಿ ದೇಶೀ ಗೋವನ್ನು ಸಾಕಿ ಪೂಜಿಸುತ್ತಿರುವದೂ ವಿಶೇಷವಾಗಿದೆ.
ಯಕ್ಷಗಾನದ ಸವ್ಯಸಾಚಿ ಕಲಾವಿದ ಮೂಲತಃ ಕುಮಟಾ ತಾಲೂಕಿನ ಮೂರೂರಿನ ನಾಗೇಂದ್ರ ಭಟ್ಟ ಅವರು ಕಳೆದ 27 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಸ್ಯ, ರಾಜ, ಬಣ್ಣದ ವೇಷ ಸೇರಿದಂತೆ ಯಾವುದೇ ಪ್ರಮುಖ, ಪೋಷಕ ಪಾತ್ರ ಮಾಡುವ ನಾಗೇಂದ್ರ ಭಟ್ಟ ಅವರು ಯಕ್ಷಗಾನ ಕ್ಷೇತ್ರದ ಆಪದ್ಭಾಂಧವ ಕಲಾವಿದ ಎಂದೇ ಖ್ಯಾತಿ ಪಡೆದಿದ್ದಾರೆ. ಗುಂಡಬಾಳ, ಪೂರ್ಣಚಂದ್ರ ಯಕ್ಷಗಾನ ಮೇಳ, ಯಾಜಿ ಯಕ್ಷಮಿತ್ರ ಮಂಡಳಿ, ವೀರಾಂಜನೇಯ ಯಕ್ಷಮಿತ್ರ ಮಂಡಳಿ ಸೇರಿ ರಾಜ್ಯ, ಹೊರ ರಾಜ್ಯಗಳಲ್ಲಿ ಸಾವಿರಕ್ಕೂ ಅಧಿಕ ಪ್ರದರ್ಶನದಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ. ಪುತ್ತೂರು ಯಕ್ಷಪಕ್ಷ ವೈಭವ, ಕೊಂಡದಕುಳಿ ರಾಮ ಹೆಗಡೆ ಸೇರಿದಂತೆ ಅನೇಕ ಪ್ರಶಸ್ತಿಗಳೂ ಬಂದಿವೆ.
ಎಂಟನೇ ವರ್ಗ ಓದುತ್ತಿರುವ ಸಾಗರದ ಶ್ರೀವತ್ಸ ಗುಡ್ಡೆದಿಂಬ ಯಕ್ಷಗಾನದ ಹಿಮ್ಮೇಳದ ಚಂಡೆ ವಾದನದಲ್ಲಿ ಗಮನ ಸೆಳೆದ ಕಿಶೋರ. ಕಲಾ ಕುಟುಂಬದ ಕುಡಿ ಶ್ರೀವತ್ಸ, ಹಿರಿಯ ಕಲಾವಿದ, ಮದ್ದಲೆವಾದಕ ಮಂಜುನಾಥ ಗುಡ್ಡೆದಿಂಬ, ಅರ್ಚನಾ ದಂಪತಿಯ ಪುತ್ರ. ಚಿಕ್ಕಂದಿನಿಂದಲೇ ಚಂಡೆ ವಾದನದಲ್ಲಿ ಆಸಕ್ತಿ ಪಡೆದವನು. ಅನೇಕ ಹಿರಿಯ ಕಲಾವಿದರಿಗೂ ಸಾಥ್ ನೀಡಿ ಗಮನ ಸೆಳೆದಿದ್ದಾನೆ. ಚಿಕ್ಕಂದಿನಿಂದಲ್ಲೇ ಶ್ರೀವತ್ಸಗೆ ಸೂರ್ಯನಾರಾಯಣ ರಾವ್, ಮಂಜುನಾಥ ಗುಡ್ಡೆದಿಂಬ ಹಾಗೂ ನಂತರ ಕಲಾವಿದರಾದ ಲಕ್ಷ್ಮೀನಾರಾಯಣ ಸಂಪ, ಶ್ಯಾಮಸುಂದರ ಭಟ್ಟರಿಂದ ಪ್ರಾಥಮಿಕ ಶಿಕ್ಷಣ, ಶಂಕರ ಭಾಗವತ್ ಇತರರ ಮಾರ್ಗದರ್ಶನ ಲಭಿಸುತ್ತಿದೆ. ರಾಜ್ಯದ ಅನೇಕ ಕಡೆ ನಡೆಯುವ ಯಕ್ಷಗಾನದಲ್ಲಿ ಚಂಡೆ ವಾದನದ ಪ್ರದರ್ಶನ ನೀಡಿದ ಈತನಿಗೆ ಮದ್ದಲೆ, ತಬಲಾ ವಾದನದ ಅಭ್ಯಾಸವೂ ಇದೆ. ಹವ್ಯಕ ಪಲ್ಲವ ಸೇರಿದಂತೆ ಅನೇಕ ಪ್ರಶಸ್ತಿಗಳೂ ಅರಸಿ ಬಂದಿವೆ.
ಡಿಸೆಂಬರ್ ತಿಂಗಳ ಮೊದಲ ಶನಿವಾರ ತಾಲೂಕಿನ ಬೆಟ್ಟಕೊಪ್ಪದಲ್ಲಿ ನಡೆಯುವ ನಮ್ಮನೆ ಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.