ಅಂಕೋಲಾ: ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ‘ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡಿಗೆ’ ಅಭಿಯಾನದ ಅಂಗವಾಗಿ ತಾಲೂಕಿನ ಬೊಬ್ರುವಾಡ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ 2024-25ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ತಯಾರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಹಾಗೂ ಅಹವಾಲುಗಳನ್ನು ಪಡೆದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ಸಭೆ ನಡೆಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಕಾ0ತ ಎನ್ ನಾಯ್ಕ್ ಅವರು ಮಾತನಾಡಿ, ನಮ್ಮ ಸೇವಾ ಅವಧಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯಾವುದೇ ಸಾಮೂದಾಯಿಕ ಕೆಲಸ ಕಾರ್ಯಗಳನ್ನು ಮಾಡಲು ಸದಾ ಸಿದ್ದನಾಗಿದ್ದೇನೆ. ಅದಕ್ಕೆ ನಿಮ್ಮ ಸಹಕಾರ ಇರಲಿ ಎಂದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ನಾಯ್ಕ್ ಮಾತನಾಡಿ, 2023-24ನೇ ಸಾಲಿನಲ್ಲಿ ನರೇಗಾದಡಿ ನಮ್ಮ ಗ್ರಾ.ಪಂ.ಗೆ ವಾರ್ಷಿಕವಾಗಿ 4400 ಮಾನವದಿನಗಳ ಸೃಜನೆಯ ಗುರಿ ನೀಡಲಾಗಿದೆ. ಭೌಗೋಳಿಕ ಕಾರಣದಿಂದಾಗಿ ಕಾಮಗಾರಿಗಳ ಪ್ರಗತಿ ಕುಂಠಿತವಾಗಿರುವುದರಿAದ ಈವರೆಗೆ ಸುಮಾರು 1000 ಮಾನವದಿನಗಳ ಸೃಜನೆಯಾಗಿದೆ. ಜೊತೆಗೆ ಯಾವುದೇ ಯೋಜನೆಯಡಿ ಕಾಮಗಾರಿ ಪಡೆಯಲು ಗ್ರಾಮ ಪಂಚಾಯತಿಗೆ ಸಂಪರ್ಕಿಸಿ ಮಾಹಿತಿ ಪಡೆದು ಅರ್ಜಿ ನೀಡಿ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಗ್ರಾಮ ಪಂಚಾಯತಿ ನೂಡಲ್ ಅಧಿಕಾರಿಗಳಾದ ಮನೋಹರ ಅವರು ಮಾತನಾಡಿ, ಕಾಲಕಾಲಕ್ಕೆ ಪ್ರತಿಯೊಂದು ಇಲಾಖೆಯಡಿಯೂ ಅಭಿವೃದ್ಧಿ ಕಾಮಗಾರಿಗಳನ್ನು ನೀಡಲಾಗುತ್ತದೆ. ಆದರೆ ಕೆಲವು ಸಮಸ್ಯೆಗಳಿಂದಾಗಿ ಕಾರ್ಯದಲ್ಲಿ ವಿಳಂಬ ಸಹಜವಾಗಿದ್ದು, ಸಾರ್ವಜನಿಕರ ಸ್ಪಂದನೆಯು ಅಷ್ಟೇಮುಖ್ಯವಾಗಿರುತ್ತದೆ ಎಂದರು.
ತಾಲ್ಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಮಾತನಾಡಿ, ನರೇಗಾದಡಿ ನೀಡಲಾಗುವ ವೈಯಕ್ತಿಕ ಹಾಗೂ ಸಾಮೂದಾಯಿಕ ಕಾಮಗಾರಿಗಳ ಮಾಹಿತಿ, ಕೂಲಿಹಣ ಪಾವತಿ, ಕುಟುಂಬವೊAದಕ್ಕೆ 100 ದಿನಗಳ ಕೂಲಿ ಕೆಲಸ ಹಾಗೂ ಜೀವಿತಾವಧಿವರೆಗೆ 2.50 ಲಕ್ಷದವರೆಗೆ ಸಹಾಯಧನದಡಿ ವೈಯಕ್ತಿಕ ಕಾಮಗಾರಿ ಪಡೆಯಲು ಅವಕಾಶ, ಕೆಲಸ ಪಡೆಯಲು ಇರುವ ಅರ್ಹತೆಯ, ಮಾನದಂಡಗಳು ಹಾಗೂ ನರೇಗಾದಡಿ ಕೂಲಿಕಾರರಿಗೆ ಇರುವ ಅನುಕೂಲತೆಗಳು, ಜಲ ಸಂಜೀವಿನಿ ವಾರ್ಷಿಕ ಕ್ರಿಯಾ ಯೋಜನೆ ತಯಾರಿಕೆ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಶಿಕಲಾ ನಾಯ್ಕ್, ಸದಸ್ಯರು, ಕಾರ್ಯದರ್ಶಿ, ಹಾಗೂ ತಾಂತ್ರಿಕ ಸಹಾಯಕ ಚಂದ್ರು ಗೌಡ, ಪಂಚಾಯತ್ ಹಾಗೂ ಎನ್‌ಆರ್‌ಎಲ್‌ಎಮ್ ಸಿಬ್ಬಂದಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.