ಯಲ್ಲಾಪುರ: ಗ್ರಾಮ ಪಂಚಾಯಿತಿಗಳು ಸರಿಯಾಗಿ ಕೆಲಸ ಮಾಡಿದರೆ ಓರ್ವ ಶಾಸಕರಿಗಿಂತ ಹೆಚ್ಚು ಕೆಲಸ ಮಾಡಲು ಅವಕಾಶವಿದ್ದು, ಪಂಚಾಯಿತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಪಂಚಾಯತ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಬುಧವಾರ ಟಿಎಂಎಸ್ ಸಭಾಭವನದಲ್ಲಿ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟ, ಪಂಚಾಯತ್‌ರಾಜ್ 30 ವರ್ಷದ ಆಚರಣೆಯ ಸಂದರ್ಭದಲ್ಲಿ, ಎರಡನೇ ಅವಧಿಯ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳಿಗೆ ಗೌರವ ಸನ್ಮಾನ ಮತ್ತು ಪಂಚಾಯತ್ ರಾಜ್ 30 ಅಭಿವೃದ್ಧಿ ಪಥ ಎತ್ತ ? ವಿಷಯದ ಕುರಿತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಡಿ ದೇಶದ ಎಲ್ಲ ರಾಜ್ಯದಲ್ಲಿಯೂ ಪಂಚಾಯತ ರಾಜ್ 30 ವರ್ಷದ ಆಚರಣೆ ನಡೆಯುತ್ತಿದೆ. ದೇಶದ ಸ್ವಾತಂತ್ರ‍್ಯದ 70 ವರ್ಷಾಚರಣೆಯ ಅಮೃತ ವರ್ಷದ ಕಾಲದಲ್ಲಿ 30 ವರ್ಷದ ಪಂಚಾಯತ್ ರಾಜ್ ವ್ಯವಸ್ಥೆ ಆಚರಣೆಯಾಗುತ್ತಿದೆ. 1993 ರಲ್ಲಿ ಮಹಿಳೆಯರಿಗೆ ಪಂಚಾಯಿತಿಯಲ್ಲಿ ಹೆಚ್ಚು ಪ್ರಾತಿನಿಧಿತ್ವ ದೊರೆಯಿತು. ಆದರೆ, ಪಂಚಾಯಿತಿಗಳ ಪ್ರತಿನಿಧಿಗಳು ಅನುಷ್ಠಾನಗೊಳಿಸಬೇಕಾದ ನಿಯಮಗಳು ಅಧಿಕಾರಿಗಳಿಗೆ ಹಸ್ತಾಂತರವಾಯಿತು. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಪಂಚಾಯತ ರಾಜ್ ಕಾಯ್ದೆ ಅಗ್ರಗಣ್ಯವಾಗಿದೆ. ಪಂಚಾಯತ ಪ್ರತಿನಿಧಿಗಳು ನಿರಾಸೆಯಿಂದ ಕೊರಗದೇ, ಇದ್ದಿರುವುದರಲ್ಲಿ ಅಭಿವೃದ್ಧಿ ಮಾಡಿ ಮುಂದೆ ಅವಕಾಶವಿದೆ ಎಂದು ಹೇಳಿದರು.
ಮಾಜಿ ಶಾಸಕ ವಿ.ಎಸ್.ಪಾಟೀಲ್ ಮಾತನಾಡಿ, ರಾಜಕೀಯ ಪಂಡಿತರು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅಧಿಕಾರ ಕೊಡಬೇಕು ಹೇಳುತ್ತಾರೆ. ಹಿಂದೆ ಮಹಾತ್ಮ ಗಾಂಧಿ ಕೂಡ ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಹೇಳಿದ್ದರು. ನಿಮ್ಮ ಒಕ್ಕೂಟದ ಮೂಲಕ ಪಂಚಾಯಿತ ರಾಜ್ಯ ಕಾಯ್ದೆಗಳನ್ನು ಹೆಚ್ಚು ತಿಳಿದುಕೊಳ್ಳಬೇಕು. ನಿಮ್ಮ ಅಧಿಕಾರ ಎಲ್ಲಿಯವರೆಗೆ ವಿಸ್ತರಿಸಿದೆ, ಏನನ್ನು ಮಾಡಬಹುದು, ನಮ್ಮಿಂದ ಗ್ರಾಮಕ್ಕೆ ಏನೆಲ್ಲ ಮಾಡಲು ಸಾಧ್ಯ ಎನ್ನುವುದನ್ನು ತಿಳಿದು ಕೊಳ್ಳಬೇಕು. ನೀವು ಅಧಿಕಾರದಲ್ಲಿದ್ದಾಗ ಮುಂದೆ ನಿಮ್ಮನ್ನು ಜನ ನೆನಪಿಡುವಂತಹ ಕಾರ್ಯವನ್ನು ಮಾಡಿ ಎಂದು ಕಿವಿ ಮಾತು ಹೇಳಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕುಮ್ಮಾರ್ ಮಾತನಾಡಿ, ಪಂ.ರಾ. ವ್ಯವಸ್ಥೆ ದಿವಂಗತ ರಾಮಕೃಷ್ಣ ಹೆಗಡೆ ಮತ್ತು ನಜೀರ್ ಸಾಬರ ದೂರದರ್ಶಿತ್ವದ ಫಲವಾಗಿ ಜಾರಿಗೊಂಡು ದೇಶದಲ್ಲಿ ಮಾದರಿಯಾಗಿ ರೂಪುಗೊಂಡಿತು ಎಂದರು. ಒಕ್ಕೂಟದ ಪ್ರಮುಖರಾದ ನಿರ್ಮಲಾ ನಾಯ್ಕ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾಶಿವ ಚಿಕ್ಕೊತ್ತಿ, ಹಾಸಣಗಿ, ಜಿ.ಪಂ. ಸಹಾಯಕ ಅಭಿಯಂತರ ಅಶೋಕ ಭಂಟ ಮುಂತಾದವರು ವೇದಿಕೆಯಲ್ಲಿದ್ದರು. ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ ಯಡಳ್ಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕ ಮಾತಾಡಿದರು. ಒಕ್ಕೂಟದ ಪ್ರಮುಖ ಸುಬ್ಬಣ್ಣ ಕುಂಟೇಗಾಳಿ ಸ್ವಾಗತಿಸಿದರು. ಅಮೃತಾ ನಾಯ್ಕ ಹಾಸಣಗಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ 15 ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು.