ಹೊನ್ನಾವರ: ತಾಲೂಕಿನ ಹಳದೀಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಐ.ಆರ್.ಬಿ. ಕಂಪನಿ ರಸ್ತೆ ನಿರ್ಮಿಸುತ್ತಿದ್ದು, ಕಳೆದ ಎರಡು ವರ್ಷದಿಂದ ದಾರಿದೀಪ ಹಾಗೂ ಗಟಾರ ವ್ಯವಸ್ಥೆಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಗ್ರಾ.ಪಂ. ಪ್ರತಿನಿಧಿಗಳ ಮುಂದಾಳತ್ವದಲ್ಲಿ ಗ್ರಾಮಸ್ಥರು ಗ್ರಾಮದ ಕೇಶವ ದೇವಸ್ಥಾನದ ಮುಂಭಾಗ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷದ ಹಿಂದೆ ಈ ಗ್ರಾಮದಲ್ಲಿ ದಾರಿದೀಪದ ವ್ಯವಸ್ಥೆ ಗಟಾರ ಸಮಸ್ಯೆ ಮುಂದಿಟ್ಟು ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದರು. ನಂತರ ಬೀದಿದೀಪ ಅಳವಡಿಕೆಗೆ ಮುಂದಾಗಿ 75% ಕಾಮಾಗಾರಿ ಮುಗಿಸಿದ್ದರು. ಕಳೆದ ಒಂದು ತಿಂಗಳಿನಿ0ದ ಅಳವಡಿಸಿದ ದಾರಿದೀಪವು ಉರಿಯುತ್ತಿರಲಿಲ್ಲ. ಮನವಿ ನೀಡಿದರೂ ಪ್ರಯೋಜನವಾಗದೇ ಇರುವಾಗ ಗ್ರಾಮಸ್ಥರೆಲ್ಲರು ಮತ್ತೆ ಪ್ರತಿಭಟನೆಗೆ ಮುಂದಾದರು. ಸ್ಥಳಕ್ಕೆ ತಾಲೂಕ ದಂಡಾಧಿಕಾರಿಗಳು ಹಾಗೂ ಐ.ಆರ್.ಬಿ ಅಧಿಕಾರಿಗಳು ಅಗಮಿಸುವಂತೆ ಬಿಗಿ ಪಟ್ಟು ಹಿಡಿದು ಪ್ರತಿಭಟನೆ ಮುಂದಾದರು.
ಸ್ಥಳಕ್ಕೆ ತಾಲೂಕ ದಂಡಾಧಿಕಾರಿ ರವಿರಾಜ್ ದಿಕ್ಷಿತ್ ಐ.ಆರ್.ಬಿ ಅಧಿಕಾರಿ ಮಲ್ಲಿಕಾರ್ಜುನ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರ ಮುಂದೆ ಸಮಸ್ಯೆ ಸರಮಾಲೆಯನ್ನು ಮುಂದಿಟ್ಟು, ಈ ಹಿಂದೆ ನೀಡಿದ ಭರವಸೆ ಈಡೇರದ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ರಸ್ತೆ ಹೆದ್ದಾರಿ ಕೂಡುವಿಕೆಯಲ್ಲಿ ಸರ್ವಿಸ್ ರಸ್ತೆ ಇಲ್ಲ. ಇದುವರೆಗೂ ಸಮರ್ಪಕವಾಗಿ ದಾರಿದೀಪ ವ್ಯವಸ್ಥೆ ಇಲ್ಲ. ಅಳವಡಿಸಿದ ದಾರಿದೀಪ ಕೆಟ್ಟು ಹೋಗಿದೆ. ಗಟಾರ ಸಮಸ್ಯೆಯಿಂದ ಮಳೆಗಾಲದಲ್ಲಿ ಹೈರಾಣುಗುತ್ತಿದ್ದೇವೆ ಎಂದು ತಮ್ಮ ಸಂಕಷ್ಟ ಹೇಳಿಕೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಂಪನಿಯ ವಿರುದ್ದ ದಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಸಮಸ್ಯೆ ಬಗೆಹರಿಯುವವರೆಗೂ ಟೋಲ್ ಬಂದ್ ಮಾಡುವಂತೆ ಒತ್ತಾಯಿಸಿದರು.
ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಿಂದಲೇ ದೂರವಾಣಿ ಮೂಲಕ ಮಾತನಾಡಿ ಗ್ರಾಮಸ್ಥರ ಬೇಡಿಕೆಯನ್ನು 15 ದಿನದೊಳಗೆ ಬಗೆಹರಿಸುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದು ತಾಲೂಕ ದಂಡಾಧಿಕಾರಿಗಳಿಗೆ, ಐ.ಆರ್.ಬಿ.ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ನವೀನ್ ನಾಯ್ಕ ,ಗಿರೀಶ್, ರೇಣುಕಾ ಹಳದೀಪುರ, ವರ್ಧಮಾನ ಜೈನ್, ಶ್ಯಾಮಲಾ ನಾಯ್ಕ, ಗಣೇಶ ಪೈ, ರತ್ನಾಕರ ನಾಯ್ಕ, ಎಮ್ ಎಚ್.ನಾಯ್ಕ, ಈಶ್ವರ ನಾಯ್ಕ, ಮಮತಾ ಶೇಟ್, ನಾಗವೇಣಿ ಗೌಡ, ಕಮಲಾ ಗೌಡ, ಸೀಮಾ ,ಸಂಶೀರ್ ಖಾನ್ , ಶಾಹಿರಾ ಶಾ, ಮಹೇಶ್ ನಾಯ್ಕ, ಸುಶೀಲಾ ನಾಯ್ಕ, ಮಹೇಶ ನಾಯ್ಕ ಗ್ರಾಮಸ್ಥರು ಹಾಜರಿದ್ದರು.