ಕಾರವಾರ: ಯುದ್ದ ವಿಮಾನಗಳ ಸಾಲಿನಿಂದ ನಿವೃತ್ತಿ ಹೊಂದಿರುವ ಟುಪಲೇವ್ (ಟಿಯು142 ) ಯುದ್ಧ ವಿಮಾನದ ಮರು ಜೋಡಣೆ ಕಾರವಾರ ಕಡಲತೀರದಲ್ಲಿ ಪ್ರಾರಂಭವಾಗಿದೆ.
ಚೆನ್ನೈನಲ್ಲಿದ್ದ ಕಾರ್ಯಭಾರ ಸ್ಥಗಿತಗೊಂಡ ಯುದ್ಧವಿಮಾನ ಟುಪಲೇವ್ ಇನ್ನು ಶಾಶ್ವತವಾಗಿ ರವೀಂದ್ರನಾಥ್ ಟಾಗೋರ್ ಕಡಲತೀರದ ಚಾಪೆಲ್ ಯುದ್ಧ ನೌಕೆ ಪಕ್ಕದಲ್ಲೇ ನಿಂತು ಪ್ರವಾಸಿಗರನ್ನು ಸೆಳೆಯಲಿದೆ. ಇನ್ನು 20 ದಿನಗಳಲ್ಲಿ ಯುದ್ಧ ವಿಮಾನ ಜೋಡಣೆ ಕಾರ್ಯ ನಡೆಯಲಿದೆ. ಯುದ್ಧ ವಿಮಾನದ ಬಿಡಿ ಭಾಗಗಳನ್ನು ಬೃಹತ್ ಲಾರಿಗಳ ಮೂಲಕ ಕಾರವಾರಕ್ಕೆ ತರಲಾಗಿದೆ.
ಇದೀಗ ಅದರ ಮರು ಜೋಡಣೆ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ನಾಲ್ಕು ಕ್ರೇನ್ , 20 ಜನ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ವಿಶಾಖಪಟ್ಟಣದಿಂದ ಯುದ್ಧ ವಿಮಾನ ಜೋಡಣೆಯ ತಜ್ಞರು ಆಗಮಿಸಿದ್ದು, ಜೋಡಣೆ ಕಾರ್ಯ ನಡೆದಿದೆ. ಟುಪಲೇವ್ 142 ವಿಮಾನ 53.6 ಮೀಟರ್ ಉದ್ದ, 35 ಮೀಟರ್ ಅಗಲವಿದೆ. ಇದರ ಅಡಿಪಾಯ ಹಾಗೂ ಯುದ್ಧ ವಿಮಾನ ತರಲು ರಾಜ್ಯ ಸರ್ಕಾರ ಎರಡು ಕೋಟಿ ವ್ಯಯಿಸಿದೆ.
ಕಾರವಾರ ನೌಕಾನೆಲೆ ಯುದ್ಧ ವಿಮಾನ ಮ್ಯುಜಿಯಂ ಸ್ಥಾಪನೆಗೆ ಮುಂದೆ ಬಂದಿದೆ. ಇನ್ನೊಂದು ತಿಂಗಳಲ್ಲಿ ಯುದ್ಧ ವಿಮಾನ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ನೋಡಲು ಲಭ್ಯವಾಗಲಿದೆ.