ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.
ತಾಲೂಕಾ ಆಸ್ಪತ್ರೆಯ ಕೆಲ ವೈದ್ಯರು ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಣ್ಣಪುಟ್ಟ ಸಮಸ್ಯೆಗೂ ಶಿವಮೊಗ್ಗಕ್ಕೆ ರೆಫರ್ ಮಾಡುತ್ತಾರೆಂಬ ಅಭಿಪ್ರಾಯ ಜನರಿಂದ ಕೇಳಿ ಬರುತ್ತಿದ್ದು, ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ, ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೂರ್ನಾಲ್ಕು ವೈದ್ಯರನ್ನು ಬಿಟ್ಟರೆ ಉಳಿದವರಿಂದ ಸಾರ್ವಜನಿಕರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಸಿಸೇರಿಯನ್ ಮಾಡಿದರೆ 5-6 ಸಾವಿರ ಹಣ ಪಡೆಯುತ್ತಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗೂ ಕೂಡ ಶಿವಮೊಗ್ಗಕ್ಕೆ ಕಳುಹಿಸುತ್ತಿದ್ದಾರೆ ಎನ್ನುತ್ತಿದ್ದಂತೆ ತಾಲೂಕಾ ವೈದ್ಯಾಧಿಕಾರಿ ಪ್ರಕಾಶ ಪುರಾಣಿಕ ಪ್ರತಿಕ್ರಿಯಿಸಿ, ಈ ರೀತಿ ಆರೋಪಗಳಿದ್ದರೆ ಲಿಖಿತವಾಗಿ ದೂರು ನೀಡಿದರೆ ವಿಚಾರಣೆ ನಡೆಸಬಹುದು ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಮಾಹಿತಿ ನೀಡಿ, ತಾಲೂಕಿನಲ್ಲಿ ಒಂದು ಕ್ಷಯ ರೋಗ ಪ್ರಕರಣ ಕಂಡು ಬಂದಿದೆ. ಎಂಟು ಟೈಪಾಯ್ಡ್ ಪ್ರಕರಣ ಪತ್ತೆಯಾಗಿವೆ. ತಾಲೂಕಿನ ಬಿಳಗಿ ಹಾಗೂ ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್.ಎಂ., ಮಾಹಿತಿ ನೀಡಿ, 2693 ಮಿಮಿ ವಾಡಿಕೆ ಮಳೆಯಲ್ಲಿ 2661 ಮಿಮೀ ಮಳೆಯಾಗಿದೆ. ಮಳೆಯ ಕೊರತೆಯಿಂದ ತಾಲೂಕಿನ ಕೆಲ ಕಡೆ ಭತ್ತಕ್ಕೆ ಬೆಂಕಿ ರೋಗ ಕಾಣಿಸಿಕೊಂಡಿದೆ.ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಲಾಖೆಯಿಂದ ರೈತರಿಗೆ ಸೂಕ್ತ ಸಲಹೆ-ಸೂಚನೆ ನೀಡಲಾಗುತ್ತಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ ಮಾಹಿತಿ ನೀಡಿ, ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಿಗೆ ಸಮವಸ್ತ್ರ ಹಾಗೂ ಶೂ, ಸಾಕ್ಸ್ ವಿತರಿಸಲಾಗಿದೆ. ಅಕ್ಟೋಬರ 8 ರಿಂದ 24 ರವರೆಗೆ ದಸರಾ ರಜೆ ನಿಗದಿಯಾಗಿದೆ ಎಂದರು. ಈ ವೇಳೆ ತಾಲೂಕಾ ಪಂಚಾಯ್ತಿ ಆಡಳಿತಾಧಿಕಾರಿ ಪಿ. ಬಸವರಾಜ, ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ ಉಪಸ್ಥಿತರಿದ್ದರು.