ಶಿರಸಿ: ಅನಾದಿಯಿಂದಲೂ ತೋಟಿಗ ಕೃಷಿಕರು ನಿರ್ವಹಿಸಿಕೊಂಡು ಬರುತ್ತಿರುವ ಹಾಗೂ ತೋಟಿಗರ ವೈವಾಟಿನಲ್ಲಿರುವ ಬೆಟ್ಟಭೂಮಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಬೆಟ್ಟ ಭೂಮಿಯನ್ನು ‘ಬ’ ಖರಾಬದಿಂದ ಮುಕ್ತಗೊಳಿಸಿ 2012ಕ್ಕಿಂತಲೂ ಪೂರ್ವದಲ್ಲಿ ಇರುವಂತೆ ಬೆಟ್ಟಭೂಮಿಯ ಪಹಣಿ ದಾಖಲು ಪಡಿಸುವಂತೆ ಆಗ್ರಹಿಸಿ ಸೆ.30 ರಂದು ಬೆಳಿಗ್ಗೆ 11 ಗಂಟೆಗೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟ ಹಾಗೂ ಜಿಲ್ಲೆಯ ಅದರಲ್ಲು ವಿಶೇಷವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ರೈತರ ನಿಯೋಗವು ಉಪವಿಭಾಗಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಲಿದೆ. ತೋಟಗಾರ ಕೃಷಿಕರಿಗೆ ಅಡಿಕೆ ಹಾಗೂ ಸಾಂಬಾರು ಬೆಳೆಗಳನ್ನು ಬೆಳೆಯಲು ಬೆಟ್ಟಭೂಮಿಯ ಅವಶ್ಯಕತೆ ಹಾಗೂ ಅನಿವಾರ‍್ಯತೆಯಿದೆ. ರಾಜ್ಯ ಸರ್ಕಾರವು 2012ರಲ್ಲಿ ಹೊರಡಿಸಿದ ಸುತ್ತೋಲೆಗೆ ಅನುಗುಣವಾಗಿ ಪಹಣಿ ಪತ್ರಿಕೆ ಸರಿಪಡಿಸುವ ಕ್ರಮ ಕೈಗೊಂಡು ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯು ಬೆಟ್ಟಭೂಮಿಯನ್ನು ಪಹಣಿಯ ಕಾಲಂ.ನಂ.3ರಲ್ಲಿ ವಿಸ್ತೀರ್ಣವನ್ನು‘ಬ’ ಖರಾಬ್ ಕ್ಷೇತ್ರಕ್ಕೆ ಒಳಪಡಿಸಿ ಕಾಲಂ.ನಂ.9ರಲ್ಲಿ ವಿಸ್ತೀರ್ಣವನ್ನು ಶೂನ್ಯಗೊಳಿಸಿದೆ. ಯಾವುದೇ ಖರಾಬಿಗೆ ಸೇರದ ಬೆಟ್ಟಭೂಮಿಯನ್ನು 1965ನೇ ಇಸ್ವಿಯಲ್ಲಿ ಆಕಾರ್ ಬಂದ್ ನಲ್ಲಿ ‘ಬ’ ಖರಾಬ್ ಗೊಳಿಸಿರುವುದೂ ಸಹ ಅಪ್ರಸ್ತುತ ಕ್ರಮವಾಗಿದೆ. ಈ ರೀತಿ ‘ಬ’ ಖರಾಬ್ ಎಂದು ನಮೂದಿಸಿದಲ್ಲಿ ಈ ಭೂಮಿಯು ಸಾರ್ವಜನಿಕರ ಭೂಮಿಯಾಗಲಿದ್ದು ಮುಂಬರುವ ದಿನಗಳಲ್ಲಿ ಸರಕಾರ ನಿಶ್ಚಿತವಾಗಿಯೂ ಸಹ ಈ ಬೆಟ್ಟ ಭೂಮಿಗಳನ್ನು ತನ್ನ ಸ್ವಾದೀನಕ್ಕೆ ಪಡೆಯಲಿದೆ ಎಂಬ ಆತಂಕವಿದೆ. ಈ ಕಾರಣದಿಂದ ಬೆಟ್ಟ ಭೂಮಿಯನ್ನು ರೈತರಲ್ಲಿಯೇ ಉಳಿಸುವ ಸಂಬಂಧ ಹೋರಾಟ ಅಗತ್ಯವಾಗಿರುವುದರಿಂದ ಮನವಿ ಸಲ್ಲಿಕೆ ಸಂದರ್ಭದಲ್ಲಿ ಶಿರಸಿ ಉಪವಿಭಾಗ ವ್ಯಾಪ್ತಿಯ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಬೆಟ್ಟ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಉತ್ತರಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.