ಕಾನಸೂರು: ನಮ್ಮ ಗುರಿ, ಕನಸು ಇವೆಲ್ಲವನ್ನು ಸರಿಯಾಗಿ ತಲುಪಬೇಕೆಂದಾಗ ನಮ್ಮ ಆರೋಗ್ಯ ಸರಿಯಾಗಿರಬೇಕು. ಆವಾಗ ಮಾತ್ರ ನಾವು ಅಂದುಕೊಂಡಂತೆ ನಡೆಯಲು ಸಾಧ್ಯ. ಅವಘಡಗಳು, ಅಪಘಾತಗಳು ಆದಾಗ ಓರ್ವ ವ್ಯಕ್ತಿಯ ಜೀವ ಉಳಿಸಲು ರಕ್ತ ಅತಿ ಅವಶ್ಯವಾಗಿದೆ. ಇದೇ ಮೊದಲ ಬಾರಿಗೆ ನಿಮ್ಮಲ್ಲಿ ಹಮ್ಮಿಕೊಂಡ ರಕ್ತ ನೀಡುವಂತಹ ಮಹಾದಾನ ಎಲ್ಲರಿಗೂ ಮಾದರಿಯಾಗಿದೆ.
ಎಂದು ಶಾಸಕ ಭೀಮಣ್ಣ ನಾಯ್ಕ ಅವರು ಹೇಳಿದರು.
ಅವರು ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕಾ ಆಡಳಿತ, ತಾಲೂಕಾ ಆರೋಗ್ಯಾಧಿಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ ಸಿದ್ದಾಪುರ, ಗ್ರಾಮ ಪಂಚಾಯತ ಕಾನಸೂರು ಇವರ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾನಸೂರುನಲ್ಲಿ ಆಯುಷ್ಮಾನ ಭವ ಅಭಿಯಾನದ ಅಂಗವಾಗಿ ಈ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಇರುವ ಪ್ರತಿಯೋರ್ವ ವ್ಯಕ್ತಿಯು ಆರೋಗ್ಯವಂತನಾಗಿ ಇದ್ದಾಗ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬನ ಜೀವ ಉಳಿಸಲು ರಕ್ತ ಮಹತ್ವವಾಗಿದ್ದು, ಅಂತಹ ಕಾರ್ಯ ಮಾಡುತ್ತಿರುವ ಪುಣ್ಯವಂತರು. ಕೇವಲ ರಕ್ತವನ್ನು ದಾನ ಮಾಡಿದರೇ ಸಾಲದು. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಗ ಆರೋಗ್ಯವಂತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಅವರು ಹೇಳಿದರು.
ಸುಮಾರು 50ಕ್ಕೂ ಹೆಚ್ಚು ಜನರು ರಕ್ತದಾನ ಶಿಬಿರದಲ್ಲಿ ರಕ್ತ ನೀಡಿದರು. ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಪ್ರಾಸ್ತಾವಿಕ ವಾಗಿ ಮಾತನಾಡಿದರು.ವೇದಿಕೆಯಲ್ಲಿ ಕಾನಸೂರು ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ರಶ್ಮೀ ಹಿರೇಮಠ, ಗ್ರಾ.ಪಂ. ಅಧ್ಯಕ್ಷೆ ಅನಿತಾ ನಾಯ್ಕ, ಸದಸ್ಯೆ ಶಶಿಪ್ರಭಾ ಡಾ. ಮಮತಾ ಹೆಗಡೆ ಉಪಸ್ಥಿತರಿದ್ದರು.