Slide
Slide
Slide
previous arrow
next arrow

ಟಿಎಸ್ಎಸ್ ಜವಾಬ್ದಾರಿ ಸ್ಥಾನಕ್ಕೆ ಯೋಗ್ಯ ವ್ಯಕ್ತಿ ತರುತ್ತೇವೆ; ನೂತನ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ

300x250 AD

ಶಿರಸಿ: ಪ್ರತಿಷ್ಟಿತ ಟಿಎಸ್ಎಸ್ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗು ಇತರ ನಿರ್ದೆಶಕರನ್ನು ಮುಂಡಗನಮನೆ ಸೇವಾ ಸಹಕಾರಿ ಸಂಘದಿಂದ ಭಾನುವಾರ ಸಂಘದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಸ್ಎಸ್ ಬೈಲಾ ಅಮೆಂಡ್ ಮೆಂಟ್ ಬದಲಾವಣೆಯಲ್ಲಿ ಆರಂಭವಾದ ಗೆಲುವು ಚುನಾವಣೆಯಲ್ಲಿ ನಮ್ಮ ಇಂದಿನ ಗೆಲುವಿಗೆ ನಾಂದಿಯಾಯಿತು. ಆ ಮೂಲಕ ಟಿಎಸ್ಎಸ್ ಬದಲಾವಣೆಯ ಪರ್ವ ಆರಂಭಗೊಂಡಿತು. ನಾವೀಗ ಆಪಾದನೆ ಮಾಡುವ ಜಾಗದಲ್ಲಿಲ್ಲ, ಬದಲಾಗಿ ತಪ್ಪುಗಳನ್ನು ಸರಿಪಡಿಸುವ ಜಾಗದಲ್ಲಿದ್ದೇವೆ. ಹಾಗಾಗಿ ಮುಂದಿನ ದಿನದಲ್ಲಿ ಸರಿಮಾಡುತ್ತೇವೆ ಎಂಬ ಭರವಸೆ ನಮಗಿದೆ ಎಂದರು

ಇದು ಕೇವಲ ವೈದ್ಯರ ಗೆಲುವಲ್ಲ, ಸಮೂಹದ ಗೆಲುವಾಗಿದೆ. ಸಂಸ್ಥೆಯ ಜವಾಬ್ದಾರಿ ಸ್ಥಾನಕ್ಕೆ ಮುಂದಿನ ದಿನದಲ್ಲಿ ಸೂಕ್ತ ವ್ಯಕ್ತಿಯನ್ನು ಜೋಡಿಸುತ್ತೇವೆ. ಆ ದಿಶೆಯಲ್ಲಿ ನನ್ನ ಮೇಲೆ ನಂಬಿಕೆಯಿಡಿ.‌ ಸಂಸ್ಥೆ ಬಗ್ಗೆ ಅಭಿಮಾನವಿರುವ ಯೋಗ್ಯ ವ್ಯಕ್ತಿಯನ್ನು ತರಲಾಗುವುದು ಎಂದರು. ನಮ್ಮ ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿರುವುದು ನನ್ನ ಎಲ್ಲ ಸಾಧನೆಗೆ ಕಾರಣವಾಗಿದೆ. ಎಲ್ಲರ ಸದಸ್ಯರ ಸಹಕಾರ ಸಿಕ್ಕಿದಾಗ ಮಾತ್ರ ಯಶಸ್ಸು ದೊರೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

300x250 AD

ಟಿಎಸ್ಎಸ್ ಉಪಾಧ್ಯಕ್ಷ ಎಮ್.ಎನ್. ಭಟ್ಟ ಮಾತನಾಡಿ, ಟಿಎಸ್ಎಸ್ ಚುನಾವಣೆಯಲ್ಲಿ ವೈದ್ಯರ ತಂಡ ಗೆದ್ದಿರುವುದು ಐತಿಹಾಸಿಕವಾದುದು. ಎಲ್ಲ ರೀತಿಯ ಪ್ರಚಾರದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಚುನಾವಣೆಯನ್ನು ನಾವು ಎದುರಿಸಿ ಗೆದ್ದಿದ್ದೇವೆ. ಇದು ಕೇವಲ ನಮ್ಮ ಗೆಲುವಲ್ಲ, ಬದಲಾಗಿ ಸದಸ್ಯರ ಗೆಲುವಾಗಿದೆ. ಜವಾಬ್ದಾರಿಯನ್ನು ನಿರ್ವಹಿಸಲು ನಮಗೆ ಸಮಾಜದ ಎಲ್ಲರ ಅವಶ್ಯಕತೆ ಇದೆ. ದಿ.ಕಡವೆ ಹೆಗಡೆಯವರು ನಮಗೆ ಪ್ರಾತಃಸ್ಮರಣೀಯರು. ಕಡವೆಯವರ ಧೋರಣೆ ಮತ್ತು ಪ್ರೇರಣೆ ನಮ್ಮ ಇಂದಿನ ಸಾಧನೆಗೆ ಕಾರಣವಾಗಿದೆ. ಮುಂದಿನ ದಿನದಲ್ಲಿ ಎಲ್ಲ ಸದಸ್ಯ ಬಾಂಧವರಿಗೆ ಪಾರದರ್ಶಕ ಸೇವೆ ನೀಡುವುದಾಗಿ ಭರವಸೆ ನೀಡಿದರು.

ಸಂಘದ ಹಿರಿಯ ನಿರ್ದೇಶಕ ಸುಬ್ರಾಯ ಹೆಗಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಟಿಎಸ್ಎಸ್ ನ ನಿರ್ದೇಶಕಿ ವಸುಮತಿ ಭಟ್ಟ ಮಾತನಾಡಿದರು. ಮುಂಡಗನಮನೆ ಸೊಸೈಟಿ ನಿರ್ದೇಶಕ ರಾಘವೇಂದ್ರ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೊಸೈಟಿ ಸದಸ್ಯ ನಾರಾಯಣ ವೈದ್ಯ ಗೋಪಾಲಕೃಷ್ಣ ವೈದ್ಯರ ಕುರಿತಾಗಿ ಅಭಿಮಾನದ ಆಶಯದ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಟಿಎಸ್ಎಸ್ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ದಂಪತಿಗಳನ್ನು ಮುಂಡಗನಮನೆ ಸೇವಾ ಸಹಕಾರಿ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಜೊತೆಗೆ ಟಿಎಸ್ಎಸ್ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳನ್ನು ಗೌರವಿಸಿ, ಶಾಲು ಹೊದೆಸಿ ಸನ್ಮಾನಿಸಲಾಯಿತು. ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯ ನಿರ್ವಾಹಕ ನಾಗಪತಿ ಹೆಗಡೆ ನಿರ್ವಹಿಸಿದರು. ಸೊಸೈಟಿಯ ಮಾರುಕಟ್ಟೆ ಸಲಹೆಗಾರ ವಿ.ಆರ್. ಹೆಗಡೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪರಿಸರ ತಜ್ಞ ಶಿವಾನಂದ ಕಳವೆ ಸೇರಿದಂತೆ ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top