ಭಟ್ಕಳ: ಮಳೆ, ಗಾಳಿ, ಬಿಸಿಲು ಎನ್ನದೆ ಪ್ರತಿದಿನ ಬೆಳಗ್ಗೆ ಮನೆ ಮನೆಗಳಿಗೆ ಪತ್ರಿಕೆ ವಿತರಿಸುವ ವಿತರಕರ ಕಾರ್ಯ ಶ್ಲಾಘನೀಯ. ಸರ್ಕಾರದಿಂದ ಅವರಿಗೆ ಸೂಕ್ತ ಸೌಲಭ್ಯ ವಿತರಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಪಟ್ಟಣದಲ್ಲಿ ತಾಲೂಕು ಪತ್ರಿಕಾ ವಿತರಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಕೊಂಡು ಓದುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಅಕ್ಷರ ಜ್ಞಾನ ಇಲ್ಲದಂತಾಗಿದೆ. ಪತ್ರಿಕೆಗಳನ್ನು ಓದುವುದರಿಂದ ದೇಶದ ಆಗು-ಹೋಗುಗಳ ನಿಖರ ಮಾಹಿತಿ ಜನರಿಗೆ ದೊರೆಯುತ್ತದೆ. ಮಾತ್ರವಲ್ಲದೆ ಸಾಮಾನ್ಯ ಜ್ಞಾನವೂ ಹೆಚ್ಚುತ್ತದೆ. ಪತ್ರಿಕೆ ವಿತರಕರು ಬೆಳಗಿನ ಜಾವ ಎದ್ದು ವಿತರಣೆಯಲ್ಲಿ ತೊಡಗುತ್ತಾರೆ. ಆದರೂ ಅವರು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅವರಿಗೆ ಸೂಕ್ತ ಸೌಲಭ್ಯ ವಿತರಿಸುವ ಕುರಿತು ಯೋಚಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಪತ್ರಿಕಾ ಒಕ್ಕೂಟದ ಭಟ್ಕಳ ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್ ಮಾತನಾಡಿ, ನಾವು ಪ್ರತಿದಿನ ಮುಂಜಾನೆ ಮನೆ ಮನೆಗಳಿಗೆ ಪತ್ರಿಕೆ ತಲುಪಿಸುತ್ತೇವೆ. ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲ. ಕಾರ್ಮಿಕ ಇಲಾಖೆಯ ಅಡಿಯಲ್ಲಿ ಸಿಗುವ ಸೌಲಭ್ಯಗಳನ್ನು ನಮಗೆ ನೀಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ತಿಪ್ಪೇಸ್ವಾಮಿ, ಡಿವೈಎಸ್‌ಪಿ ಶ್ರೀಕಾಂತ ಕೆ., ಪತ್ರಿಕಾ ವಿತರಕರ ಭಟ್ಕಳ ಒಕ್ಕೂಟದ ಕಾರ್ಯದರ್ಶಿ ಮಂಜುನಾಥ ದೇವಾಡಿಗ, ಉಪಾಧ್ಯಕ್ಷ ಮಧುಸೂಧನ ಕಾಯ್ಕಿಣಿ, ಖಜಾಂಚಿ ದಯಾನಂದ ನಾಯ್ಕ, ಸದಸ್ಯರಾದ ನಾಗೇಶ ಆರ್. ನಾಯ್ಕ, ರಾಮ ಎಸ್. ಗೊಂಡ, ಮಂಜುನಾಥ ಮೊಗೇರ, ಗಣೇಶ ನಾಯ್ಕ, ಮಂಜುನಾಥ ನಾಯ್ಕ, ಸಂತೋಷ ನಾಯ್ಕ, ನಾಗರಾಜ ಶೆಟ್ಟಿ, ಮಹೇಶ ದೇವಾಡಿಗ, ಸುಬ್ರಹ್ಮಣ್ಯ ಕಾಯ್ಕಿಣಿ, ಕಿರಣ ಗೊಂಡ, ಧನಂಜಯ ನಾಯ್ಕ ಇತರರು ಇದ್ದರು.