ಅಂಕೋಲಾ: ಬಸ್ ನಿಲ್ದಾಣದ ಆವಾರದಲ್ಲಿದ್ದ ಮರಕ್ಕೆ ಸಾರಿಗೆ ಬಸ್ ಡಿಕ್ಕಿ ಹೊಡೆದು 14 ಪ್ರಯಾಣಿಕರು ಗಾಯಗೊಂಡು ಘಟನೆ ಮಂಗಳವಾರ ನಡೆದಿದೆ. ಅವರ್ಸಾದ ತಾರಿಬೊಳೆಯ ನಿವಾಸಿ ಗಾಯತ್ರಿ ಮಾರುತಿ ಅಂಬಿಗ, ಕಾರವಾರದ ಸದಾಶಿವಗಡದ ಪಾರವ್ವ ಲೋಕೇಶ ಲಮಾಣಿ, ಹಾನಗಲದ ಶಾಂತವ್ವ ಗುರವಪ್ಪ ಗೊಲ್ಲರ ಇವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ. ಕಾರವಾರದಿಂದ ಬೆಂಗಳೂರಿಗೆ ಸಾಗುವ ಬಸ್ ಇದಾಗಿದ್ದು, ಅಂಕೋಲಾ ನಿಲ್ದಾಣದಿಂದ ಬಸ್ ಸಾಗುವ ವೇಳೆ ಚಾಲಕ ಎಚ್.ಬಿ.ಸ್ವಾಮಿ ಹಿಂಬದಿಯ ಪ್ರಯಾಣಿಕರನ್ನು ನೋಡುತ್ತ ನಿರ್ಲಕ್ಷತದಿಂದ ಬಸ್ ಚಲಾಯಿಸಿದ್ದರಿಂದ ನಿಲ್ದಾಣದಲ್ಲಿರುವ ಸಾಗವಾನಿ ಮರಕ್ಕೆ ಬಸ್ ಗುದ್ದಿದೆ.
ಕೂಡಲೆ ಗಾಯಾಳುಗಳನ್ನು ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಡಾ.ರಮೇಶ, ಡಾ.ಅನುಪಮಾ, ಡಾ.ರಾಜೇಶ ಅವರು ಚಿಕಿತ್ಸೆ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಸುಧಾಕರ ಎಮ್.ನಾಯ್ಕ, ಬಾಬು ಕೇಣಿಕರ ಸ್ಥಳಾಕ್ಕಾಗಮಿಸಿ ಗಾಯಾಳುಗಳಿಂದ ಮಾಹಿತಿ ಪಡೆದಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಸರಕಾರಿ ಆಸ್ಪತ್ರೆಗೆ ಅಂಕೋಲಾ ಸಾರಿಗೆ ಡಿಪೋದ ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ, ಎಟಿಎಸ್ ಶಿವಾನಂದ ನಾಯ್ಕ, ಟ್ರಾಫಿಕ್ ಕಂಟ್ರೋಲರ ಪ್ರಕಾಶ ನಾಯ್ಕ ಭೇಟಿ ನೀಡಿ ಗಾಯಾಳುಗಳ ಕ್ಷೇಮ ವಿಚಾರಿಸಿದ್ದಾರೆ.