ಗೋಕರ್ಣ: ಶ್ರಾವಣ ಶುಕ್ರವಾರದ ನಿಮಿತ್ತ ಗೋಕರ್ಣದ ಅಧಿದೇವತೆ ಎನಿಸಿಕೊಂಡಿರುವ ಶ್ರೀ ಭದ್ರಕಾಳಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು. ಗೋಕರ್ಣ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಭಕ್ತ ಸಮೂಹ ಇಲ್ಲಿಗೆ ಬಂದು ಶ್ರೀ ದೇವಿಯ ದರ್ಶನ ಪಡೆಯುತ್ತಾರೆ.
ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಗೋಕರ್ಣಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ಅವರು ಮೊದಲು ಕೋಟಿತೀರ್ಥಕ್ಕೆ ತೆರಳಿ ನಂತರ ಗಣಪತಿ ದೇವಸ್ಥಾನದ ದರ್ಶನ ಮಾಡಿ ನಂತರ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ದೇವರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಭದ್ರಕಾಳಿ ದೇವಿಯ ಬಗ್ಗೆ ಹೊರಗಿನ ಭಕ್ತರಿಗೆ ಅಷ್ಟಾಗಿ ಪರಿಚಯವಿಲ್ಲ. ಹೀಗಾಗಿ ಕೆಲವರು ಈ ದೇವಾಲಯಕ್ಕೆ ಆಗಮಿಸದೇ ಮರಳುತ್ತಾರೆ.
ಆದರೆ ಸ್ಥಳೀಯರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಆಗಮಿಸುತ್ತಾರೆ. ಶ್ರೀ ಭದ್ರಕಾಳಿ ದೇವಿಯ ದರ್ಶನ ಮಾಡುವವರ ಸಂಖ್ಯೆ ಸ್ಥಳೀಯರದ್ದೇ ಅಧಿಕವಾಗಿದೆ. ಹಾಗೇ ಇಲ್ಲಿ ಗಂಡು ಹೆಣ್ಣು ನೋಡುವುದು ಕೂಡ ಮಾಡುತ್ತಾರೆ. ಹೀಗಾಗಿ ಇಲ್ಲಿ ಪ್ರತಿನಿತ್ಯ ಭಕ್ತರು ಆಗಮಿಸುತ್ತಲೇ ಇರುತ್ತಾರೆ. ಆದರೆ ಶುಕ್ರವಾರ ಮಾತ್ರ ಇಲ್ಲಿ ವಿಶೇಷ ಹೂವಿನ ಅಲಂಕಾರ ಹಾಗೂ ಪೂಜೆ ನಡೆಯುವುದರಿಂದ ಭಕ್ತರ ಸಂಖ್ಯೆ ಕೂಡ ಅಧಿಕವಾಗಿರುತ್ತದೆ.