ಮುಂಡಗೋಡ: ವಾಸ್ತವ್ಯ ಮತ್ತು ಸಾಗುವಳಿಗೆ ಸಂಬಂಧಿಸಿ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡಲು ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಅವಶ್ಯಕತೆಯಿಲ್ಲ. ಪ್ರಚಲಿತ ಕಾನೂನು ಅಡಿಯಲ್ಲಿ ಅರಣ್ಯ ಹಕ್ಕು ನೀಡಲು ಕಾನೂನಿನಲ್ಲಿ ಅವಕಾಶವಿದೆ. ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಸೋಮವಾರ ಮುಂಡಗೋಡ ತಾಲೂಕಿನ ಅರಣ್ಯವಾಸಿಗಳಿಗೆ ಗುರುತಿನ ಪತ್ರ ನೀಡುವ ಸಂದರ್ಭದಲ್ಲಿ ಅರಣ್ಯವಾಸಿಗಳನ್ನ ಉದ್ದೇಶಿಸಿ ಮೇಲಿನಂತೆ ಮಾತನಾಡಿ, ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿ ವಿಧಿ ವಿಧಾನ ಅನುಸರಿಸದೇ ಅರ್ಜಿಗಳು ತಿರಸ್ಕಾರವಾಗುತ್ತಿರುವುದು ವಿಷಾದಕರ. ಅರಣ್ಯ ಹಕ್ಕು ನೀಡುವಲ್ಲಿ ಕಾನೂನು ತಿಳುವಳಿಕೆ ಅಜ್ಞಾನದಿಂದ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ವೈಫಲ್ಯವಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.
ಸಭೆಯಲ್ಲಿ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ ಅಧ್ಯಕ್ಷತೆಯನ್ನ ವಹಿಸಿದ್ದರು. ಮಲ್ಲಿಕಾರ್ಜುನ ಓಣಿಕೇರಿ, ಮಹೇಶ್ ಗಣೇಶಪುರ, ಅಭಿಲಾಶ್ ಚಿಗಳ್ಳಿ, ಜಗದೀಶ್ ಶೆಟ್ಟರ್ ಮಲವಳ್ಳಿ, ಸುರೇಶ್ ಕಟಗಿ, ವೀರಣ್ಣ ಬಾಳೆಮಠ, ಮೌಲಾಲಿ ದುಂಡಶಿ ಮಲವಳ್ಳಿ, ಹನುಮಂತ್ ಸಿಂಗ್, ಕೃಷ್ಣ ಕಾತೂರ, ಚಿಕ್ಕಪ್ಪ ಬಸಪ್ಪ ಹಿರೇಹಳ್ಳಿ, ನಸೀರ್ ಸಾಬ್ ಬೊಮ್ಮನಳ್ಳಿ, ದುರ್ಗಪ್ಪ ಭಜಂತ್ರಿ, ಯಲ್ಲಪ್ಪ ಜಿನ್ನೂರು, ಶಿವರುದ್ರಪ್ಪ ನಿಲೇಕಣಿ ಮುಂತಾದವರು ಉಪಸ್ಥಿತರಿದ್ದರು.
ಕಾನೂನು ಅರಣ್ಯವಾಸಿ ಪರ:
ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಮತ್ತು ಕೇಂದ್ರ ಸರಕಾರದ ಸುತ್ತೋಲೆಗಳು ಅರಣ್ಯವಾಸಿಗಳ ಪರವಾಗಿದ್ದು, ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ನೀಡಲು ಪೂರಕವಾಗಿದೆ. ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿರುವ ಕುರಿತು ವ್ಯಾಪಕವಾದ ಜನ ಜಾಗೃತೆ ಮಾಡಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.