ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಿದರು ಎಂದು ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗೃಹ ಕಚೇರಿ ಕೃಷ್ಣದಲ್ಲಿ ಅವರನ್ನು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಭೇಟ್ಟಿಯಾಗಿ ಇಂದು ಅವರಿಗೆ ಮಾಹಿತಿ ನೀಡಿದರು.
ಅರಣ್ಯ ಸಾಂದ್ರತೆ ಹೆಚ್ಚಿಸುವ ಮತ್ತು ಅರಣ್ಯವಾಸಿಗಳಿಗೆ ಪರಿಸರ ಜಾಗೃತೆ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮವನ್ನು ಛಾಯಾಚಿತ್ರಗಳ ಮೂಲಕ ವಿಶ್ಲೇಷಿಸಿದಾಗ ಮುಖ್ಯಮಂತ್ರಿಗಳು ಅರಣ್ಯವಾಸಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
41 ಸಾವಿರ ಕುಟುಂಬ: ಜುಲೈ 31ರಂದು ಪ್ರಾರಂಭವಾದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ ಆ.20 ರವರೆಗೆ 167 ಗ್ರಾಮ ಪಂಚಾಯತ ವ್ಯಾಪ್ತಿಯ, 803 ಹಳ್ಳಿಗಳಲ್ಲಿ ಸುಮಾರು 41 ಸಾವಿರ ಅರಣ್ಯವಾಸಿಗಳ ಕುಟುಂಬಗಳು ಗಿಡ ನೆಡುವ ಕಾರ್ಯದಲ್ಲಿ ಸಕ್ರಿಯವಾಗಿರುವ ಅಭಿಯಾನದ ವಿಶೇಷತೆಯನ್ನ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ರವೀಂದ್ರ ನಾಯ್ಕ ವಿವರಿಸಿದರು.