ಹರಿದ್ವಾರ: ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಜನವರಿ 16 ಮತ್ತು ಜನವರಿ 24 ರ ನಡುವೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಭಾನುವಾರ ಹೇಳಿದ್ದಾರೆ.
ಹರಿದ್ವಾರದಲ್ಲಿ ಸಂತರು ಮತ್ತು ದಾರ್ಶನಿಕರನ್ನು ಭೇಟಿಯಾಗಲು ಬಂದಿದ್ದ ರಾಯ್, ಗರ್ಭಗುಡಿ ಸಿದ್ಧವಾಗಿದ್ದು, ಭವ್ಯ ಮಂದಿರದ ಮೊದಲ ಮಹಡಿಯ ನಿರ್ಮಾಣ ಪೂರ್ಣಗೊಂಡ ನಂತರ ಶ್ರೀರಾಮನ ವಿಗ್ರಹವನ್ನು ಇರಿಸಲಾಗುವುದು ಎಂದು ಹೇಳಿದರು.ಮಕರ ಸಂಕ್ರಾಂತಿ ನಂತರ ಜನವರಿ 16 ಮತ್ತು 24, 2024 ರ ನಡುವೆ ಯಾವುದೇ ದಿನಾಂಕದಂದು ದೇವಾಲಯದ ಗರ್ಭಗುಡಿಯಲ್ಲಿ ರಾಮ ಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು” ಎಂದು ರಾಯ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅವರು ಅಯೋಧ್ಯೆಯಲ್ಲಿ 10 ದಿನಗಳ ಪ್ರಾಣ ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ದರ್ಶಕರು ಮತ್ತು ಸಂತರನ್ನು ಆಹ್ವಾನಿಸಿದ್ದಾರೆ.
ಪ್ರಸ್ತುತ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕಾಗಿ ಸಂತರು ಮತ್ತು ಸಾಧುಗಳನ್ನು ಮೌಖಿಕವಾಗಿ ಆಹ್ವಾನಿಸಲಾಗುತ್ತಿದೆ ಎಂದ ಅವರು, ನವೆಂಬರ್ ತಿಂಗಳಿನಲ್ಲಿ ದೇಶದ ಎಲ್ಲಾ ಸಂಪ್ರದಾಯಗಳ ಭಕ್ತರಿಗೆ ಔಪಚಾರಿಕ ಆಹ್ವಾನವನ್ನು ಕಳುಹಿಸಲಾಗುವುದು ಎಂದು ಹೇಳಿದರು.
ಆಗಸ್ಟ್ 5, 2020 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ‘ಭೂಮಿ ಪೂಜೆ’ ನಡೆಸಿದ್ದರು.
ರಾಮ ಮಂದಿರ ನಿರ್ಮಾಣ ಕಾಮಗಾರಿಯನ್ನು ಲಾರ್ಸನ್ ಅಂಡ್ ಟೂಬ್ರೊ ಸಂಸ್ಥೆ ನಡೆಸುತ್ತಿದೆ. 1000 ಕೋಟಿ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣವಾಗುವ ನಿರೀಕ್ಷೆ ಇದೆ.