ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರ ಕನ್ನಡ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ಸರ್ಕಾರ ಮತ್ತು ಪಕ್ಷದ ಜತೆ ಸಮನ್ವಯ ಸಾಧಿಸಲು, ಐದು ಗ್ಯಾರಂಟಿ ಯೋಜನೆಗಳನ್ನು ಮಧ್ಯಮ ಮತ್ತು ಬಡ ವರ್ಗದ ಎಲ್ಲಾ ಜಾತಿ ಸಮುದಾಯಗಳ ಮನೆ ಬಾಗಿಲಿಗೆ ತಲುಪಿಸಲು ಸಿಎಂ, ಡಿಸಿಎಂ ಎಲ್ಲಾ ಶಾಸಕರುಗಳಿಗೆ ಸೂಚಿಸಿದರು. ಶಾಸಕರು, ಸಚಿವರ ಜತೆ ಹೊಂದಾಣಿಕೆ ಇರಬೇಕು. ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಲು ಈಗಲೇ ತಯಾರಿಗಳನ್ನ ಮಾಡಿಕೊಳ್ಳುವಂತೆ ಸೂಚಿಸಿದರು.
ಇದೇ ವೇಳೆ ಸಚಿವರು, ಶಾಸಕರೆಲ್ಲರೂ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ಆಗ್ರಹಿಸಿದರು. ಸಚಿವ ಮಂಕಾಳ ವೈದ್ಯ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯ ಮತ್ತು ಅನಿವಾರ್ಯವಿದೆ. ಜನತೆಗೆ ಭರವಸೆ ನೀಡಿದ್ದೇವೆ. ಹೀಗಾಗಿ ಸರ್ಕಾರ ಜನತೆಯ ಭರವಸೆಯನ್ನು ಈಡೇರಿಸಬೇಕೆಂದು ಕೋರಿದರು. ಸಚಿವರ ಮಾತಿಗೆ ಸಿಎಂ ಸ್ಪಂದಿಸಿ, ಈ ಬಗ್ಗೆ ಶೀಘ್ರವೇ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಬಂದರುಗಳ ಅಭಿವೃದ್ಧಿ, ಜಿಲ್ಲೆಯ ಸಮಸ್ಯೆಗಳಲ್ಲಿ ಒಂದಾಗಿರುವ ಇ- ಸ್ವತ್ತು ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಶಾಸಕರುಗಳಾದ ಆರ್.ವಿ. ದೇಶಪಾಂಡೆ, ಸತೀಶ್ ಸೈಲ್, ಭೀಮಣ್ಣ ನಾಯ್ಕ ಇದ್ದರು.