• Slide
    Slide
    Slide
    previous arrow
    next arrow
  • ಪಂಚಾಯ್ತಿಗಳಿಗೆ ಪ್ರೇರಣೆ ಮಾಡಿದ ಪ್ರಭಾರಿ ಇಓ: 32 ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛ

    300x250 AD

    ಶಿರಸಿ: ವಾಟ್ಸಪ್‌ಗಳಲ್ಲಿ ಒಂದು ಮೆಸೇಜ್ ನೀಡಿದ ಪರಿಣಾಮ ಕೇವಲ 24 ಗಂಟೆಯೊಳಗೆ ತಾಲೂಕಿನ 32ಕ್ಕೂ ಅಧಿಕ ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛಗೊಂಡು ನಳ ನಳಿಸುವಂತೆ ಆಗಿದೆ. ಈವರೆಗೆ ಒಂದೇ ಒಂದು ಕಸಬರಿಗೆಯನ್ನೂ ಕಾಣದ ಹಳ್ಳಿ ಭಾಗದ ಅನೇಕ ಬಸ್ ನಿಲ್ದಾಣಗಳಲ್ಲಿ ಈಗ ಕಸವಿಲ್ಲದ ಸ್ಥಿತಿಗೆ ತಲುಪಲು ಆರಂಭಿಸಿದೆ.
    ಗಲೀಜಾಗಿ ಬಸ್‌ಗಾಗಿ ಕಾಯಲು ಬಂದ ಪ್ರಯಾಣಿಕರು ಕೂಡ ಕೂರಲೂ ಆಗದೇ ಇದ್ದ ಸ್ಥಿತಿಯಲ್ಲಿದ್ದ ಅನೇಕ ಬಸ್ ನಿಲ್ದಾಣಗಳನ್ನು ಆಯಾ ಗ್ರಾಮ ಪಂಚಾಯ್ತಿಗಳ ಸಿಬ್ಬಂದಿಗಳ, ಅಧಿಕಾರಿಗಳ ನೇತೃತ್ವದಲ್ಲಿ, ಹೊಸ ಅಧ್ಯಕ್ಷರ, ಉಪಾಧ್ಯಕ್ಷರ ತಂಡಗಳ ಮೇಲುಸ್ತುವಾರಿಯಲ್ಲಿ ಸ್ವಚ್ಛಗೊಳ್ಳುತ್ತಿವೆ.

    ಕಳೆದ ಆ.7ರಂದು ತಾಲೂಕು ಪಂಚಾಯ್ತಿಯಲ್ಲಿ ಗ್ರಾಮ ಪಂಚಾಯತ್ ಪಿಡಿಓಗಳ ಸಭೆ ನಡೆಸಿದ್ದ ಶಾಸಕ ಭೀಮಣ್ಣ ನಾಯ್ಕ ಒಂದು ಸೂಚನೆ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಇರಬೇಕು. ಹಾಗೆ ಗ್ರಾಮ ಪಂಚಾಯತ್ ಕೆಲಸ ಮಾಡಬೇಕು ಎಂದು ಹೇಳಿದ್ದರು. ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ಪಂಚಾಯ್ತಿಯ ನೂತನ ಪ್ರಭಾರಿ ಕಾರ್ಯನಿರ್ವಹಣಾ ಅಧಿಕಾರಿ ಸತೀಶ ಹೆಗಡೆ ಒಂದು ಮೆಸೇಜ್‌ನ್ನು ತಾಲೂಕು ಗ್ರಾಮ ಪಂಚಾಯ್ತಿಗಳ ಪಿಡಿಓಗಳ ಗ್ರೂಪ್‌ನಲ್ಲಿ ಹಾಕಿದ್ದರು. ಆ.23ರ ಒಳಗೆ ಆಯಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿನ ಎಲ್ಲ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಇರುವ ಒಣ ಕಸ ವಿಲೇವಾರಿ ಸಿಬ್ಬಂದಿ ಹಾಗೂ ಪಂಚಾಯ್ತಿಯ ನೌಕರರು ಸಹಿತ, ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಒಂದು ಅಭಿಯಾನ ಮಾದರಿಯಲ್ಲಿ ನಡೆಸುವಂತೆ ಕೋರಿದ್ದರು.


    ಮೆಸೇಜ್ ಇಟ್ಟ 24 ಗಂಟೆಯೊಳಗೆ ತಾಲೂಕಿನ 32 ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛವಾದವು. ಗುದ್ದಲಿ, ಪಿಕಾಸಿ, ಕೆಲವಡೆ ನೀರನ್ನೂ ಒಯ್ದು ಸ್ವಚ್ಛಗೊಳಿಸಿದರು. ಬರಲಿರುವ ಆ.23ರೊಳಗೆ 32 ಪಂಚಾಯ್ತಿ ವ್ಯಾಪ್ತಿಯ ಎಲ್ಲ ಸಣ್ಣ ಪುಟ್ಟ ಬಸ್ ನಿಲ್ದಾಣಗಳು ಸ್ವಚ್ಛವಾಗಿಸಲು ಗ್ರಾ.ಪಂ. ತಂಡ ಕೂಡ ಮುಂದಾಗಿದೆ.
    ಒಂದೇ ದಿನ 45-50 ಕ್ವಿಂಟಾಲ್ ತನಕ ಕೂಡ ಕಸಗಳು ಸಿಕ್ಕಿರಬಹುದು ಎಂದು ಅಂದಾಜಿಸಲಾಗಿದೆ. ಪ್ಲಾಸ್ಟಿಕ್ ಕಸಗಳು, ಉಳಿಕೆ ತ್ಯಾಜ್ಯಗಳನ್ನು ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕಗಳಿಗೂ ಒಯ್ಯಲಾಯಿತು. ಒಂದೇ ದಿನಕ್ಕೇ ಈ ಪ್ರತಿಕ್ರಿಯೆ ಸಿಕ್ಕಿರುವದು ಅಚ್ಚರಿಯಾಗಿದೆ ಎಂದೂ ಇಓ ಸತೀಶ ಹೆಗಡೆ ಹರ್ಷ ವ್ಯಕ್ತಪಡಿಸಿದ್ದಾರೆ.

    ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿ ನೀಡುವಾಗ ಪಂಚಾಯ್ತಿಗೆ ಖರ್ಚು ಬಾರದಂತೆ ಕ್ರಮ ಜರುಗಿಸಬೇಕು ಎಂದು ಇಓ ಸೂಚಿಸಿದ್ದರು. ಸಣ್ಣ ಪುಟ್ಟ ದುರಸ್ತಿ ಇದ್ದರೆ ಮಾಡಿಸಬಹುದು. ಸ್ವಚ್ಛತೆಗೆ ಯಾವುದೇ ಖರ್ಚು ಹಾಕದೇ ಅಭಿಯಾನ ನಡೆಸಬೇಕು ಎಂಬುದಾಗಿ ಹೇಳಿದ್ದರು.
    ಸ್ವತಃ ಜನಪ್ರತಿನಿಧಿಗಳು, ಪಂಚಾಯ್ತಿ ಸಿಬ್ಬಂದಿಗಳು ತೊಡಗಿಕೊಂಡಿದ್ದನ್ನು ನೋಡಿದ ಹಳ್ಳಿ ಭಾಗದ ಜನರೂ ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಿದ್ದು ಇನ್ನೊಂದು ವಿಶೇಷವಾಗಿದೆ. ಇದೊಂದು ಮಾದರಿ ಅಭಿಯಾನವಾಗಿ ನಿರಂತರವಾಗಿರುವಂತೆ ತಾವೂ ಸಹಕಾರ ನೀಡುವದಾಗಿ ಕೆಲವು ಗ್ರಾಮಸ್ಥರೂ ವಾಗ್ದಾನ ಮಾಡಿದ್ದು ಉಲ್ಲೇಖನೀಯವಾಗಿದೆ. ಹೀಗೆ ಆರಂಭವಾದ ಈ ಸ್ವಚ್ಛತಾ ಅಭಿಯಾನವನ್ನು ಪ್ರಥಮ ಹಂತದಲ್ಲಿ ಆಯಾ ಪಂಚಾಯ್ತಿಯಗಳು ಆ.23ರ ತನಕ ನಡೆಸಲಿದ್ದಾರೆ.

    300x250 AD


    ಈ ಸ್ವಚ್ಛತಾ ಅಭಿಯಾನದಲ್ಲಿ ಗ್ರಾಮ ಪಂಚಾಯ್ತಿಗಳ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು, ಜನಪ್ರತಿನಿಧಿಗಳು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ವೃದ್ಧಿಸಿದೆ. ಶಾಸಕರ ಸೂಚನೆಯಂತೆ ನಮ್ಮ ಬಸ್ ನಿಲ್ದಾಣ ನಮ್ಮ ಹೆಮ್ಮೆ ಎಂಬ ಮಾದರಿಯಲ್ಲಿ ನಿರ್ವಹಣೆ ಆಗಲಿ ಎಂಬ ಆಶಯ ನಮ್ಮದು.

    • ಸತೀಶ ಹೆಗಡೆ, ಪ್ರಭಾರಿ ಇಓ

    ನನ್ನ ಕ್ಷೇತ್ರ ಸ್ವಚ್ಛ ಕ್ಷೇತ್ರ ಆಗಬೇಕು ಎಂಬ ಕನಸು ನನ್ನದು. ಹೀಗಾಗಿ ಪಿಡಿಓಗಳ ಸಭೆ ಕೂಡ ನಡೆಸಿದ್ದೆ. ಬಸ್ ನಿಲ್ದಾಣಗಳಿಂದ ಈ ಕೆಲಸ ಆರಂಭವಾಗಿದೆ. ಇದು ನಿರಂತರ ಅಭಿಯಾನವಾಗಿ ಮುಂದುವರಿಯಲಿ.

    • ಭೀಮಣ್ಣ ನಾಯ್ಕ, ಶಾಸಕ
    Share This
    300x250 AD
    300x250 AD
    300x250 AD
    Leaderboard Ad
    Back to top