ಶಿರಸಿ: ತಾಲೂಕಿನ ಸೋದೆ ವಾದಿರಾಜ ಮಠದ ಪೀಠಾಧಿಪತಿಗಳಾದ ವಿಶ್ವವಲ್ಲಭತೀರ್ಥ ಶ್ರೀಪಾದಂಗಳ ಜ್ಞಾನೋತ್ಸವ ಚಾತುರ್ಮಾಸ್ಯ ಹಾಗೂ ಅಧಿಕ ಶ್ರಾವಣ ಮಾಸ ಪ್ರಯುಕ್ತ ನಡೆದ ಭಕ್ತಿ ಭಾವ ಗಾನವು ನೆರೆದ ಅಭಿಮಾನಿಗಳಲ್ಲಿ ಭಕ್ತಿರಸಧಾರೆ ಹರಿಸುವಲ್ಲಿ ಯಶಸ್ವಿಯಾಯಿತು.
ಅಂತರಾಷ್ಟ್ರೀಯ ಖ್ಯಾತ ಗಾಯಕ ಪಂ.ಜಯತೀರ್ಥ ಮೇವುಂಡಿ ತಮ್ಮ ಗಾನದ ಮೂಲಕ ಜ್ಞಾನೋತ್ಸವ ಭಕ್ತಿ ಗಾನ ಸುಧೆಗೆ ಅರ್ಥ ಕಲ್ಪಿಸಿಕೊಟ್ಟರು. ಎರಡರಿಂದ ಎರಡುವರೆ ತಾಸುಗಳಿಗೆ ಮಿಕ್ಕಿ ಭಕ್ತಿ ಭಾವ ತುಂಬಿದ ವಚನ, ದಾಸರ ಪದಗಳನ್ನು ಅತ್ಯಂತ ಭಾವಪೂರ್ಣವಾಗಿ ಹಾಡಿ ಮಂತ್ರಮುಗ್ಧಗೊಳಿಸಿದರು. ಪಂ. ಮೇವುಂಡಿಯವರ ಗಾಯನಕ್ಕೆ ತಬಲಾದಲ್ಲಿ ಶ್ರೀಹರಿ ದಿಗ್ಗಾವಿ ಹಾಗೂ ಗಣೇಶ ಗುಂಡ್ಕಲ್, ಕೊಳಲಿನಲ್ಲಿಎಸ್. ಪ್ರಕಾಶ ಬೆಂಗಳೂರು, ಹಾರ್ಮೋನಿಯಂನಲ್ಲಿ ಗುರುಪ್ರಸಾದ ಹೆಗಡೆ ಧಾರವಾಡ ಸಮರ್ಥವಾಗಿ ಸಾಥ್ ನೀಡಿದರು. ಹಿನ್ನೆಲೆ ಸಹಗಾನದಲ್ಲಿ ನಿಖಿಲ್ ಮೇವುಂಡಿ ಸಹಕರಿಸಿದರು. ವಾದಿರಾಜ ಮಠದ ಶ್ರೀಗಳವರು ಸಂಪೂರ್ಣ ಗಾನವನ್ನು ಆಲಿಸಿ ಕೊನೆಯಲ್ಲಿ ಎಲ್ಲ ಕಲಾವಿದರಿಗೆ ಶಾಲು ಹೊದೆಸಿ, ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು.