ಶಿರಸಿ: ಇಲ್ಲಿನ ಅಜಿತ ಮನೋಚೇತನಾ ವಿಕಾಸ ಬುದ್ಧಿಮಾಂದ್ಯ ಶಾಲೆಯ ಮಕ್ಕಳು ಆ.15, ಸ್ವಾತಂತ್ರ ದಿನದಂದು ಸಂಭ್ರಮದಲ್ಲಿದ್ದರು. ಪಾಲಕರೇ ತಮ್ಮ ವಿಶೇಷ ಮಕ್ಕಳಿಗೆ ರಾಷ್ಟ್ರ ಪುರುಷರ ವೇಷ ಹಾಕಿ ಕರೆ ತಂದಿದ್ದರು. ವಿಶೇಷ ಮಕ್ಕಳು ಸೈನಿಕ, ಭಾರತ ಮಾತೆ, ಅಂಬೇಡ್ಕರ, ನೆಹರು ಆಗಿ ಪ್ರದರ್ಶನ ನೀಡಿದರು. ಇಂಗ್ಲೀಷ ಭಾಷೆಯಲ್ಲಿ ಭಾಷಣ ನೀಡಿದರು. ಜೈ ಜವಾನ್, ಜೈ ಕಿಸಾನ್ ಘೋಷಣೆ ಮೊಳಗಿಸಿದರು. ವಂದೇ ಮಾತರಂ ಗೀತೆ ಹಾಡಿದರು. ಈ ಮಕ್ಕಳ ಪಾಲಕರು ಬೆರಗಾಗಿ ಭಲೆ ಎಂದು ಉದ್ಘಾರ ತೆಗೆದರು.
ಮುಖ್ಯೋಧ್ಯಾಪಕಿ ನರ್ಮದಾ ಸ್ವಾಗತಿಸಿದರು. ಅಜಿತ ಮನೋಚೇತನಾ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ರಾಷ್ಟ್ರ ಧ್ವಜಾರೋಹಣ ಮಾಡಿದರು. ಮುಖ್ಯ ಅತಿಥಿ ರೋಟರಿ ಅಧ್ಯಕ್ಷ ಶ್ರೀಧರ ಹೆಗಡೆ, ರವಿ ಹೆಗಡೆ ಗಡಿಹಳ್ಳಿ, ದೀಪಕ ಭಟ್, ಪಾಲಕರು ಹಿತೈಷಿಗಳು ಪಾಲ್ಗೊಂಡರು. ಶಿಕ್ಷಕಿ ಸುಮಿತ್ರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬೆಂಗಳೂರಿನಲ್ಲಿ ನಡೆದ ಅಂಬಾ ಸಂಸ್ಥೆಯ ಕಂಪ್ಯೂಟರ್ ಪರಿಚಯ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಹಾಗೂ ಛದ್ಮ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪಾಲಕಿ ಖಲೀದಾ ದೇಶ ಭಕ್ತಿಗೀತೆ ಹಾಗೂ ಪಾಲಕರಾದ ಸಂಜೀವ ಬಡಿಗೇರ್ ನಮ್ಮ ವಿಕಲ ಚೇತನ ಮಗುವಿಗೆ, ನಮಗೆ ನೆಮ್ಮದಿ ಸಮಾದಾನ ಸಿಗುವಂತೆ ಮಾಡಿದ್ದೀರಿ ಎಂದು ಕೃತಜ್ಞತೆ ಹೇಳಿದರು.