ಶಿರಸಿ: ಸ್ವಾತಂತ್ರ್ಯ ಪುಕಟ್ಟೆಯಾಗಿ ಬಂದಿಲ್ಲ. ಭಾರತೀಯರ ತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನು ಇನ್ನಾರ ಕಡೆಗೂ ಹೋಗದಂತೆ ಸುಭದ್ರವಾಗಿ ಮುನ್ನಡೆಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ ಇಂದಿನ ಯುವಶಕ್ತಿಯ ಮೇಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಹೇಳಿದರು.
ಅವರು ಆ.14ರ ರಾತ್ರಿ ಅಂಬೇಡ್ಕರ್ ಭವನದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನದ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿ,ಸುಮಾರು ಆರು ನೂರು ವರ್ಷಗಳ ಭಾರತವನ್ನು ಇಸ್ಲಾಮರು ಆಳಿದರೂ ಇವತ್ತಿನವರಗೆ ಭಾರತ ಭಾರತವಾಗಿಯೇ ಇದೆ ಎಂದರೆ ಭಾರತಿಯರ ದೇಶಪ್ರೇಮ, ಭಕ್ತಿ, ತ್ಯಾಗ ಬಲಿದಾನವೇ ಕಾರಣವಾಗಿದೆ. ದೇಶಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡ ಸಾಕಷ್ಟು ದೇಶ ಭಕ್ತರಿದ್ದಾರೆ.ಅವರನ್ನು ಈ ದಿನವಾದರೂ ಸ್ಮರಿಸದಿದ್ದರೆ ಅವರಿಂದ ದೊರೆತ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥವೇ ಇಲ್ಲದಂತಾಗುತ್ತದೆ ಎಂದರು.
ನಮಗೆ ಅನ್ನ,ನೀರು ಬದುಕು ಕೊಟ್ಟ ತಾಯಿಯೇ ಭಾರತ ಮಾತೆ. ಭಾರತ ಮಾತೆಗೆ ಕೊಂಚ ನೋವಾದರೂ ಮಾತೆಯ ರಕ್ಷಣೆಗಾಗಿ ನಾವೆಲ್ಲ ಭಾರತೀಯರು ತೊಡೆತಟ್ಟಿ ನಿಲ್ಲಬೇಕಾಗುತ್ತದೆ.
ನಮಗೆ ಇಚ್ಛಾಶಕ್ತಿಯ ಕೊರತೆಯಿದೆ. ಇಚ್ಛಾಶಕ್ತಿಯೊಂದಿದ್ದರೆ ಭಾರತ ಮೊಘಲರಿಂದ ಬ್ರಿಟೀಷರಿಂದ ಬಹುಬೇಗ ಬಂಧಮುಕ್ತಗೊಂಡು ಅಖಂಡ ಭಾರತವಾಗಿರುತ್ತಿತ್ತು. ನಮ್ಮ ರಾಜಕೀಯ ನಾಯಕರು ಹಿಂದಿನಿಂದಲೂ ಹಿಂದು ಮುಸ್ಲಿಂ ಭಾಯೀ ಭಾಯೀ ಎನ್ನುತ್ತಿದ್ದಾರೆ. ಆದರೆ ದುರ್ದೈವ ಎಂದರೆ ಮಹಮದ್ ಅಲಿ ಜಿನ್ನಾ ಮುಸ್ಲಿಮರಿಗಾಗಿ ಭಾರತವನ್ನು ತುಂಡು ಮಾಡಿ ಪಾಕಿಸ್ತಾನ ಮಾಡಿದರು. ಈ ಪಾಕಿಸ್ತಾನ ಏಕೆ ಹುಟ್ಟಿಕೊಂಡಿತು ಮತ್ತು ಆ ಸಂದರ್ಭದಲ್ಲಿ ಹಿಂದುಗಳ ಮೇಲೆ ಎಂತಹ ದುರ್ಘಟನೆ ನಡೆಯಿತೆನ್ನುವದನ್ನು ನಮ್ಮ ಸಮಾಜ ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಹಿಂದೂ ಜಾಗರಣೆ ವೇದಿಕೆ ಕಳೆದ 35 ವರ್ಷಗಳಿಂದ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ನಮಗೆ ಅಭದ್ರತೆ ಕಾಡುವ ಈ ಸಂದರ್ಭದಲ್ಲಿ ದೇಶಕ್ಕಾಗಿ ಬಹುದೊಡ್ಡ ಕನಸು ಕಾಣುವ ಯುವ ಶಕ್ತಿಯನ್ನು ಹುಟ್ಟು ಹಾಕುವುದೇ ಅಖಂಡ ಭಾರತದ ಉದ್ದೇಶವಾಗಿದೆ ಎಂದರು.2047 ರ ಹೊತ್ತಿಗೆ ಭಾರತವನ್ನು ಇಸ್ಲಾಂ ದೇಶವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಅದು ಪಾಕಿಸ್ತಾನ ಬೇರ್ಪಟ್ಟ ರೀತಿಯಲ್ಲಿ ನಡೆದರೂ ಆಶ್ಚರ್ಯವಿಲ್ಲ, ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮತಾಂತರ ಮಾಡುವುದು, ದಂಗೆ ಹಚ್ಚುವುದು, ಅಶಾಂತಿ ಸೃಷ್ಟಿಸುವುದು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುವುದು. ಇದು ಅವರ 2047 ರ ಯೋಜನೆಯಾಗಿದೆ. ಇದಕ್ಕೆ ನಾವು ಕೂಡಾ ಸದಾ ಸನ್ನದ್ಧರಾಗಿರಬೇಕು. ಇಸ್ಲಾಂನ ಆಕ್ರಮಣ ಕೇವಲ ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ನಡೆದಿದೆ. ಅದೆಷ್ಟೋ ದೇಶಗಳ ಮೇಲೆ ಮತಾಂಧರು ಆಕ್ರಮಣ ಮಾಡಿದ್ದರ ಪರಿಣಾಮ ಆ ದೇಶದ ಸಂಸ್ಕೃತಿ, ನಾಗರಿಕತೆ ಸರ್ವನಾಶವಾಗಿದೆ ಎಂದರು.
ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಭಾರತವನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಒಂದು ವೇಳೆ ಹಾಕಿದರೆಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಈ ದೇಶಕ್ಕಿದೆ.ಭಾರತ ಜಗತ್ತಿಗೆ ಎಶ್ವ ಗುರುವಾಗುತ್ತಿರುವಾಗ ನಾವೆಲ್ಲರೂ ಒಗ್ಗಟ್ಟಿನಿಂದಿರಬೇಕು. ಹಿಂದೂ ಪರವಾದ ಸಂಘಟನೆಗಳಿಗೆ ಯಾವತ್ತೂ ಜೀವಜಲ ಕಾರ್ಯಪಡೆಯ ಸಹಾಯ ಸಹಕಾರವಿದೆ ಎಂದರು.
ನಿವೃತ್ತ ಸೈನಿಕ ವಿನೋದ ನಾಯ್ಕ ಮಾತನಾಡಿ ಅಗ್ನಿಪಥ ಯೋಜನೆಯಡಿಯಲ್ಲಿ ದೇಶಸೇವೆ ಮಾಡುವ ಅವಕಾಶವಿದೆ. 17.5 ವರ್ಷದಿಂದ 21 ವರ್ಷದವರೆಗೂ ಸೇವೆಮಾಡುವ ಅವಕಾಶವಿದೆ. ಸರಕಾರದ ಈ ಮಹತ್ವದ ಯೋಜನೆಯು ಸೈನಿಕ ಮನೋಭಾವನೆಯುಳ್ಳ ಜನರನ್ನು ಸೃಷ್ಟಿಸಲು ಅವಕಾಶವಿದೆ. ನಾಳಿನ ತುರ್ತು ಸಂದರ್ಭದಲ್ಲಿ ಇಂತವರ ಸೇವೆ ಭಾರತಕ್ಕೆ ಅಗತ್ಯವಾಗಿದೆ ಎಂದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಹರೀಶ ಕರ್ಕಿ ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆಯ ಮಹಾಬಲೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.