ಶಿರಸಿ: ಅವೈಜ್ಞಾನಿಕ, ವಾಸ್ತವಿಕ ಹಾಗೂ ಮಾನವ ಜೀವನ ಬದುಕಿಗೆ ವ್ಯತಿರಿಕ್ತವಾಗಿರುವ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯವನ್ನು ರಾಜ್ಯ ಸರಕಾರ ತೆಗೆದುಕೊಳ್ಳಬೇಕೆಂದು ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗವು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿಯಾಗಿ ಆಗ್ರಹಿಸಲಾಗುವುದೆಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಕಸ್ತೂರಿ ರಂಗನ್ ವರದಿಯ ಮುಖ್ಯಾಂಶಗಳನ್ನು ಪ್ರಸ್ತುತ ಪಡಿಸುತ್ತಾ ಮೇಲಿನಂತೆ ಮಾತನಾಡಿದರು.
ಪಶ್ಚಿಮಘಟ್ಟದ ಜೀವವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ ವರದಿಯಂತೆ ಗುಜರಾತ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ರಾಜ್ಯ ಒಳಗೊಂಡ ಸುಮಾರು 59,940 ಚ.ಕೀ.ಮೀ ಪ್ರದೇಶವನ್ನ ಡಾ. ಕಸ್ತೂರಿರಂಗನ್ ವರದಿಯಲ್ಲಿ ಪರಿಸರ ಅತೀ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದೆ. ಕರ್ನಾಟಕದಲ್ಲಿ 20,668 ಚ.ಕೀ.ಮೀ ಪ್ರದೇಶವು 1,597 ಹಳ್ಳಿಗಳಿಗೆ ವಿಸ್ತರಿಸಿದ್ದು, ಅದರಂತೆ ಉತ್ತರ ಕನ್ನಡ ಜಿಲ್ಲೆಯ 90 ತಾಲೂಕುಗಳಿಂದ 704 ಹಳ್ಳಿಗಳು ಸೇರ್ಪಡೆಗೊಂಡಿದೆ ಎಂದು ಅವರು ವರದಿಯ ಕುರಿತು ವಿಶ್ಲೇಷಿಸುತ್ತಾ ಹೇಳಿದರು.
ಅಭಿವೃದ್ಧಿಗೆ ಮಾರಕ :
ಕಸ್ತೂರಿರಂಗನ್ ಮತ್ತು ಅಭಯಾರಣ್ಯ ಪ್ರದೇಶದಲ್ಲಿ ಗುರುತಿಸಲಾದ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡ, ರಸ್ತೆ, ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಬಂಧಿಸಿದ ಕೈಗಾರಿಕೆಗಳಿಗೆ ಕಡಿವಾಣ, ಆಧುನಿಕ ಪ್ರವಾಸೋದ್ಯಮಕ್ಕೆ ಮಾರಕ, ಟೌನ್‌ಶಿಫ್ ಮತ್ತು ಬಹುಮಡಿಗೆ ಕಟ್ಟಡಗಳಿಗೆ ನಿರ್ಬಂಧ, ವಾಣಿಜ್ಯಕರಣ ಮುಂತಾದ ನಿರ್ಬಂಧಕ್ಕೆ ಒಳಪಡುವದರಿಂದ ಗ್ರಾಮಸ್ಥರ ಜೀವನ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೇ ಅಭಿವೃದ್ದಿಗೆ ಮಾರಕ ಉಂಟಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಓಮಣ್ಯ ಮರಾಠಿ ಉಪಸ್ಥಿತರಿದ್ದರು.