ದಾಂಡೇಲಿ: ಗಣಿತ ಕಷ್ಟ ಹೌದು, ಆದರೆ ಇಷ್ಟದಿಂದ ಅಭ್ಯಾಸ ಮಾಡಿದಾಗ ಗಣಿತದಷ್ಟು ಸುಲಭದ ಮತ್ತು ಮನಸ್ಸಿಗೆ ಅತ್ಯಂತ ಮುದ ಕೊಡುವ ವಿಷಯ ಇನ್ನೊಂದಿಲ್ಲ. ಗಣಿತದಲ್ಲಿ ಬುದ್ದಿವಂತನಿದ್ದವನು ಸರಿಯಾದ ಲೆಕ್ಕಚಾರವನ್ನಿಟ್ಟುಕೊಂಡು ಬದುಕು ರೂಪಿಸಿಕೊಳ್ಳುತ್ತಾನೆ ಎಂದು ಬಂಗೂರನಗರ ಜ್ಯೂನಿಯರ್ ಕಾಲೇಜಿನ ನಿವೃತ್ತ ಗಣಿತ ಉಪನ್ಯಾಸಕಿ ಪ್ರತಿಭಾ ದೇಶಪಾಂಡೆಯವರು ಹೇಳಿದರು.
ಅವರು ನಗರದ ಬಂಗೂರನಗರ ಜ್ಯೂನಿಯರ್ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಗಣಿತ ಕಷ್ಟ ಎನ್ನುವ ಭ್ರಮೆಯಿಂದ ವಿದ್ಯಾರ್ಥಿಗಳು ಹೊರಬರಬೇಕು. ಏಕಾಗ್ರತೆ, ತಾಳ್ಮೆ ಮತ್ತು ಆಸಕ್ತಿಯಿದ್ದಲ್ಲಿ ಗಣಿತ ಕಲಿಕೆ ಅತೀ ಸುಲಭವಾಗಿದೆ. ನನ್ನ 35 ವರ್ಷಗಳ ವೃತ್ತಿ ಬದುಕು ಅತ್ಯಂತ ಶ್ರೇಷ್ಟ ಬದುಕಾಗಿದೆ. ಈ ಅವಧಿಯಲ್ಲಿ ನನಗೆ ಮಾರ್ಗದರ್ಶನವಿತ್ತು ಪ್ರೋತ್ಸಾಹಿಸಿದ ಕಾಲೇಜಿನ ಆಡಳಿತ ಮಂಡಳಿ, ನನ್ನ ಬೆಳವಣಿಗೆಗೆ ಸದಾ ಹರಿಸಿದ ಕಾಲೇಜಿನ ಎಲ್ಲಾ ಪ್ರಾಚಾರ್ಯರು ಮತ್ತು ಸಹದ್ಯೋಗಿಗಳ ಸಹಕಾರ ಮತ್ತು ವಿದ್ಯಾರ್ಥಿಗಳ ಪ್ರೀತಿ, ವಾತ್ಸಲ್ಯ ಸದಾ ಸ್ಮರಣೀಯ ಎಂದು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಸನ್ಮಾನಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಆಶಾಲತಾ ಜೈನ್ ಅವರು ಪ್ರತಿಭಾ ದೇಶಪಾಂಡೆಯವರು ನಮ್ಮ ಕಾಲೇಜಿನ ಹೆಮ್ಮೆಯ ಸಾಧನೆಯ ಸಾಧಕಿ, ಅದ್ಭುತ ಮತ್ತು ಅನನ್ಯ ಪ್ರತಿಭೆಯಾಗಿದ್ದರು. 35 ವರ್ಷಗಳ ಸಾರ್ಥಕ ಶೈಕ್ಷಣಿಕ ಸೇವೆಯಲ್ಲಿ ಸದಾ ಕ್ರೀಯಾಶೀಲರಾಗಿ ವಿದ್ಯಾರ್ಥಿಗಳ ಉನ್ನತಿಗಾಗಿ ತನ್ನನ್ನು ತಾನು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿ ಅವರ ನಿವೃತ್ತ ಜೀವನವು ಸುಖಕರವಾಗಿರಲೆಂದು ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾ ದೇಶಪಾಂಡೆ ದಂಪತಿಗಳನ್ನು ಕಾಲೇಜಿನ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು ಪ್ರತಿಭಾ ದೇಶಪಾಂಡೆಯವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ, ನಿವೃತ್ತ ಜೀವನಕ್ಕೆ ಶುಭ ಕೋರಿದರು. ಕಾಲೇಜಿನ ಅಧೀಕ್ಷಕ ಶ್ರೀಮಂತ ಮದರಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಎನ್.ವಿ.ಪಾಟೀಲ್ ವಂದಿಸಿದರು. ಪ್ರಕಾಶ್ ಮೇಹ್ತಾ ಮತ್ತು ನೇಮಿನಾಥ್ ಗೌಡ ಅವರು ನಿರೂಪಿಸಿದರು.