ದಾಂಡೇಲಿ: ಕರ್ತವ್ಯನಿರತ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ಹಳೆದಾಂಡೇಲಿಯಲ್ಲಿ ನಡೆದಿದೆ.
ದಾಂಡೇಲಿ ಸಾರಿಗೆ ಘಟಕದ ನಗರ ಸಾರಿಗೆ ಬಸ್ಸೊಂದು ನಗರದ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಹಳೆದಾಂಡೇಲಿಗೆ ಹೊರಟಿತ್ತು. ಹೀಗೆ ಹೋಗುವಾಗ ಹಳೆದಾಂಡೇಲಿಯ ಹಳೆ ಕೋರ್ಟ್ ವೃತ್ತದ ಹತ್ತಿರ ಯುವಕನೊರ್ವ ನಡುರಸ್ತೆಯಲ್ಲಿ ಇದ್ದಿರುವುದಕ್ಕೆ ಬಸ್ಸಿನ ಚಾಲಕ ನಾಗೇಶ್.ಎಸ್.ಹಡ್ಲಿಗೇರಿ ಹಾರ್ನ್ ಹೊಡೆದಿದ್ದಾನೆ. ಆಗಲು ಆತ ಅಲ್ಲಿಂದ ಹೋಗದೇ ಇದ್ದಾಗ ಬಸ್ ನಿಲ್ಲಿಸಿದ್ದಾನೆ. ಎಷ್ಟು ಹೊತ್ತಾದರೂ ಯುವಕ ಅಲ್ಲಿಂದ ಕದಡದೇ ಇದ್ದ ಸಂದರ್ಭದಲ್ಲಿ ಬಸ್ ಸ್ಟಾರ್ಟ್ ಮಾಡಿದ್ದಾನೆ.
ಆಗ ಯುವಕ ರಸ್ತೆ ಬದಿಗೆ ಬಂದಿದ್ದಾನೆ. ಹೀಗೆ ಹಳೆದಾಂಡೇಲಿಗೆ ಹೋಗಿ ಪ್ರಯಾಣಿಕರನ್ನು ಇಳಿಸಿ, ಅಲ್ಲಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಮರಳಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಅದೇ ಕೋರ್ಟ್ ವೃತ್ತದ ಹತ್ತಿರ ಅದೇ ಯುವಕ ಕೈಯಲ್ಲಿ ಕಲ್ಲನ್ನು ಹಿಡಿದು ಬಸ್ಸಿಗೆ ಹೊಡೆಯಲು ಮುಂದೆ ಬಂದಿದ್ದಾನೆ. ಆಗ ಚಾಲಕ ತಕ್ಷಣವೆ ಬಸ್ಸನ್ನು ನಿಲ್ಲಿಸಿ, ಪ್ರಯಾಣಿಕರಿಗೆ ತೊಂದರೆಯಾಗದಿರಲೆOದು ಆತನಲ್ಲಿಗೆ ಹೋಗಿ ಆತನ ಕೈಯಲ್ಲಿದ್ದ ಕಲ್ಲನ್ನು ಕಿತ್ತುಕೊಂಡಿದ್ದಾನೆ. ಇಷ್ಟಾದ ಕೂಡಲೆ ಆ ಯುವಕ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಚಾಲಕನ ಒಂದು ಕಣ್ಣಿಗೆ ಹೊಡೆತಬಿದ್ದಿದೆ.
ಇಷ್ಟು ನಡೆಯುತ್ತಿರುವಾಗ ಹಲ್ಲೆ ಬಿಡಿಸಲು ಬಂದ ನಿರ್ವಾಹಕಿ ಸಾವಿತ್ರಿ.ಬಿ.ಕುಳ್ಳಿನವರ್ ಅವರನ್ನು ತಳ್ಳಿ ಹಲ್ಲೆಗೆ ಮುಂದಾಗಿದ್ದಾನೆ. ಇಷ್ಟೊತ್ತಿಗಾಗುವಾಗಲೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಜಗಳವನ್ನು ಬಿಡಿಸಿದ್ದಾರೆ. ಹಲ್ಲೆಗೊಳಗಾದ ಚಾಲಕ ನಾಗೇಶ್ ಎಸ್.ಹಡ್ಲಿಗೇರಿ ಮತ್ತು ನಿರ್ವಾಹಕಿ ಸಾವಿತ್ರಿ ಬಿ.ಕುಳ್ಳಿನ್ನವರ ಅವರನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ. ಘಟನಾ ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ನಗರ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.