ದಾಂಡೇಲಿ: ಮಾನವ ಕಳ್ಳ ಸಾಗಾಣಿಕೆ ಇತ್ತೀಚಿನ ವರ್ಷಗಳಲ್ಲಿ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಿಡುಗಿಗೆ ಬಲಿಪಶುಗಳಾಗುತ್ತಿದ್ದಾರೆ. ಅಪಹೃತ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಸಲಾಗುತ್ತಿದೆ. ಇಂತಹ ಹೀನ ಕೃತ್ಯವನ್ನು ತಪ್ಪಿಸುವುದು ನಾಗರಿಕ ಸಮಾಜದ ಬಹುದೊಡ್ಡ ಜವಾಬ್ದಾರಿಯಾಗಿದೆ. ಇಂತಹ ಕುಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕೆಂದು ಸಿವಿಲ್ ನ್ಯಾಯಾಧೀಶರಾದ ರೋಹಿಣಿ ಡಿ.ಬಸಾಪುರ ಕರೆ ನೀಡಿದರು.
ಅವರು ನಗರದ ಬಂಗೂರನಗರ ಜ್ಯೂನಿಯರ್ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಬಂಗೂರನಗರ ಜ್ಯೂನಿಯರ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಮತ್ತು ಮಕ್ಕಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಂದು ವಿದ್ಯಾರ್ಥಿಯು ಅರಿವನ್ನು ಹೊಂದಿರಬೇಕೆOದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯೆ ಆಶಾಲತಾ ಜೈನ್ ವಹಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಕುಲಕರ್ಣಿ, ವಕೀಲರ ಸಂಘದ ಉಪಾಧ್ಯಕ್ಷೆ ರೇಷ್ಮಾ ಬಾವಾಜಿ, ಕರ‍್ಯದರ್ಶಿ ಐ.ಸಿ.ನಾಯ್ಕ, ಹಿರಿಯ ವಕೀಲ ಎಂ.ಸಿ.ಹೆಗಡೆಯವರು ಭಾಗವಹಿಸಿದ್ದರು.
ಹಿರಿಯ ವಕೀಲ ಎಸ್.ಸೋಮಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾನೂನು ಮಾಹಿತಿ ನೀಡಿದರು. ನಿವೃತ್ತರಾದ ಕಾಲೇಜಿನ ಗಣಿತ ಉಪನ್ಯಾಸಕಿ ಪ್ರತಿಭಾ ದೇಶಪಾಂಡೆಯವರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯ್ತು. ಪ್ರತಿಭಾ ದೇಶಪಾಂಡೆಯವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ವಕೀಲ ಆರ್.ವಿ.ಗಡೆಪ್ಪನವರ್ ಮತ್ತು ಪ್ರಕಾಶ್ ಮೇಹ್ತಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪನ್ಯಾಸಕರುಗಳಾದ ನೇಮಿನಾಥ್ ಗೌಡ ಸ್ವಾಗತಿಸಿದರು. ಎನ್.ವಿ.ಪಾಟೀಲ್ ವಂದಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ವೃಂದ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.