ಸಿದ್ದಾಪುರ: ಆದಿ ಕವಿ ಪಂಪನ ಪುತ್ಥಳಿ ಅವನ ಪ್ರೀತಿಯ, ಅಭಿಮಾನದ ತಾಣ ಬನವಾಸಿಯಲ್ಲಿಲ್ಲ. ಕಸಾಪ ಬನವಾಸಿಯಲ್ಲಿ ಆದಿಕವಿಯ ಪುತ್ಥಳಿ ಸ್ಥಾಪನೆಗೆ ಮುಂದಾಗಲಿದೆ. ಸೂಕ್ತ ಸ್ಥಳ ಗುರುತಿಸಿ ಆ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ನಾಡೋಜ ಡಾ.ಮಹೇಶ ಜೋಷಿ ಹೇಳಿದರು.
ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಲ್ಲಿ ಪುತ್ಥಳಿ ಸ್ಥಾಪನೆಯಾದರೆ ನೋಡಿದ ನೂರರಲ್ಲಿ ಒಂದು ಹತ್ತು ಜನರಾದರೂ ಪಂಪ ಯಾರು ಎಂದು ಯೋಚಿಸುತ್ತಾರೆ. ಒಬ್ಬಿಬ್ಬರಾದರೂ ಅವರ ಕುರಿತಾಗಿ ಅಧ್ಯಯನ ಮಾಡುತ್ತಾರೆ. ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದರು.ಭುವನಗಿರಿ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಎಲ್ಲ ರೀತಿಯ ಸಹಕಾರಕ್ಕೂ ಕಸಾಪ ಸಿದ್ಧವಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ನೆರವಿನ ಮೂಲಕ ಅಲ್ಲಿ ಪ್ರವಾಸಿ ತಾಣ ಅಭಿವೃದ್ಧಿಪಡಿಸಲು ಮುಂದಾಗುತ್ತೇವೆ. ಮಂಡ್ಯದಲ್ಲಿ ನಡೆಯಲಿರುವ ಅಖಿಲಭಾರತ ಕಸಾಪ ಸಮ್ಮೇಳನದ ಪೂರ್ವಭಾವಿ ಸಭೆ ಅ.7ರಂದು ನಡೆಯಲಿದೆ. ಆ ಸಭೆಗೂ ಮುನ್ನ ಶ್ರೀ ಕ್ಷೇತ್ರ ಭುವನಗಿರಿಯ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿ ಬಂದಿದ್ದೇನೆ. ಈ ಹಿಂದೆ ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ಭುವನಗಿರಿಯಿಂದ ಜ್ಯೋತಿಯನ್ನು ತೆಗೆದುಕೊಂಡು ಹೋಗಲಾಗಿತ್ತು. ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಆ ನಂಬಿಕೆಯನ್ನು ನಾನು ಹೊಂದಿದ್ದೇನೆ. ಈ ವರ್ಷ ಹಿಂದಿನ ವರ್ಷದ ಅನುಭವ ಹಾಗೂ ನೂನ್ಯತೆಗಳನ್ನು ಸರಿಪಡಿಸಿಕೊಂಡು ಉತ್ತಮವಾದ ರೀತಿಯಲ್ಲಿ ನಡೆಸಲಾಗುವುದು ಎಂದರು.