ಯಲ್ಲಾಪುರ: ಪಟ್ಟಣದಲ್ಲಿ ಶ್ರದ್ಧೆ ಭಕ್ತಿಯಿಂದ ಶನಿವಾರ ಸಾವಿರಾರು ಜನ ಪಾಲ್ಗೊಳ್ಳುವಿಕೆಯಲ್ಲಿ ಮೋಹರಂ ಆಚರಿಸಲಾಯಿತು.
ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಮೊಹರಂ ಹಬ್ಬವೂ ಒಂದು. ಇದು ದುಃಖವನ್ನು ಸೂಚಿಸುವ ಹಬ್ಬವಾಗಿದೆ. ಈ ದಿನವು ಪ್ರವಾದಿ ಮೊಹಮ್ಮದ್‌ರ ಮೊಮ್ಮಗ ಹುಸೇನ್ ಇಬ್ನ ಅಲಿ ಅವರ ಮರಣವನ್ನು ಸ್ಮರಿಸುವ ದಿನವಾಗಿದೆ. ಮೊಹರಂ ಮುಸ್ಲಿಂ ಉಮ್ಮಾಗೆ ನೆನಪಿನ ಸಮಯವೂ ಆಗಿದೆ. ಪಟ್ಟಣದಲ್ಲಿ ಶೌರ್ಯ, ತ್ಯಾಗ, ಬಲಿದಾನದ ಸಂಕೇತವಾದ ಮೋಹರಂ ಹಬ್ಬವನ್ನು ಶೃದ್ಧೆ ಭಕ್ತಿ ಹಾಗೂ ದುಃಖದ ದಿನವಾಗಿ ಮುಸ್ಲಿಂ ಸಮಾಜದವರು ಆಚರಿಸಿದರು.
ಇದಕ್ಕೂ ಮುನ್ನ ಮೋಹರಂ ಆರನೇ ದಿನವಾದ ಮಂಗಳವಾರ ಶಟ್ಟಿ ಮಾಡಲಾಯಿತು, ಏಳನೇ ದಿನವಾದ ಬುಧವಾರ ಪಟ್ಟಣದಲ್ಲಿ ಪಂಜಾಗಳ ಮೆರವಣಿಗೆ ನಡೆದವು. ಕತ್ತಲ್ ರಾತ್ ಶುಕ್ರವಾರದಂದು ಎಲ್ಲ ಮೊಹರಂ ಪಂಜಾಗಳ ಸ್ಥಾಪಿಸಲಾದ ಸ್ಥಳಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಶನಿವಾರ ನಸೂಕಿನಲ್ಲಿ ನಾಯಕನಕೆರೆ, ತಟಗಾರ ಕ್ರಾಸ್, ನೂತನನಗರ ಜಡ್ಡಿ, ಅಂಬೇಡ್ಕರ್ ಗಲ್ಲಿ, ವಲೀಶಾಗಲ್ಲಿ ಪಂಜಾಗಳನ್ನು ಸೇರಿ ಕೊನೆಯಲ್ಲಿ ದರ್ಗಾ ಗಲ್ಲಿ ಮೋಹರಂ ಪಂಜಾಗಳನ್ನು ಸ್ಥಾಪಿಸಲಾದ ಕಡೆಗೆ ತೆರಳಿದವು. ಅಲ್ಲಿ ಧಾರ್ಮಿಕ ವಿಧಿ ವಿಧಾನದ ಪೂರೈಸಿದ ನಂತರ ಎಲ್ಲ ಪಂಜಾಗಳು ಮೂಲ ಸ್ಥಾನಕ್ಕೆ ತೆರಳಿ ತದನಂತರ ಎಲ್ಲ ಪಂಜಾ ಹಾಗೂ ಡೋಲಿಗಳು ದರ್ಗಾಗಲ್ಲಿಯಿಂದ ಮಧ್ಯಾಹ್ನದ ಮೋಹರಂ ಮೆರವಣಿಗೆಯಲ್ಲಿ ಭಾಗವಹಿಸಿದವು.
ದರ್ಗಾಗಲ್ಲಿಯಿಂದ ದೇವಿ ದೇವಸ್ಥಾನ ರಸ್ತೆಯಲ್ಲಿ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಿ ಜೋಡುಕೆರೆ ಕೊನೆಯಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು. ಮೊಹರಂ ಮೆರವಣಿಗೆ ವೀಕ್ಷಿಸಲು ಮುಸ್ಲಿಂ ಸಮಾಜದವರೊಂದಿಗೆ ಇನ್ನಿತರ ಸಮಾಜದವರು ರಸ್ತೆಯ ಇಕ್ಕೆಲಗಳಲ್ಲಿ ಸೇರಿರುವುದು ವಿಶೇಷವಾಗಿತ್ತು.