ಯಲ್ಲಾಪುರ: ಮಳೆ ಹಾಗೂ ಗಾಳಿಯ ಮಧ್ಯೆಯೂ ಕೂಡ ಸಮರ್ಥವಾಗಿ ವಿದ್ಯುತ್ ಪೂರೈಸಿ ಎಲ್ಲಾ ಹಾನಿಯನ್ನು ಸರಿಪಡಿಸಿಕೊಂಡು ಗ್ರಾಹಕರಿಗೆ ಸೇವೆ ನೀಡುತ್ತಿರುವ ಹೆಸ್ಕಾಂ ಉಪವಿಭಾಗ ಎದುರಿಸಿರುವ ಸಮಸ್ಯೆಗಳು ಬಹಳಷ್ಟು, ಈ ಮಧ್ಯ ಸಮರ್ಪಕವಾಗಿ ವಿದ್ಯುತ್ ಪೂರೈಸಿರುವ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸೇವೆ ಮಾತ್ರ ಶ್ಲಾಘನೀಯ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ, ದೇಶ, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯವಾಗಿ ಕೂಡ ಬಹಳಷ್ಟು ಜನ ತತ್ತರಿಸಿ ಹೋಗಿದ್ದರು. ಈಗಲೂ ಕೂಡ ಕೆಲವು ಜನ ಮನೆಮಠ ಕಳೆದುಕೊಂಡು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಹಾಗೂ ಕೆಲವು ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆ ಆಗದಂತೆ ಹೆಸ್ಕಾಂ ಉಪ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನೋಡಿಕೊಂಡಿದ್ದರು.
ಮಳೆಯೊoದಿಗೆ ಗಾಳಿ ಬೀಸಿದ್ದು, ಮರ ಹಾಗೂ ಮರದ ಟೊಂಗೆಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬೀಳುವುದು, ಕಂಬ ಕಿತ್ತು ಹೋಗುವುದು, ಕಂಬ ಮುರಿದು ಬೀಳುವುದು, ಟ್ರಾನ್ಸ್ಫರ್‌ಗಳು ಹಾಳಾಗುವುದು ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೂ ಮಳೆ ಗಾಳಿಗೆ ಎದೆಗುಂದದೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ಇಲ್ಲಿಯ ಅಧಿಕಾರಿಗಳು ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದಾರೆ ಇವರ ಕಾರ್ಯ ಶ್ಲಾಘನೀಯ.
ಜೂನ್ 1ರಿಂದ ಜುಲೈ 27ರವರೆಗೆ ಯಲ್ಲಾಪುರ ತಾಲೂಕಿನಲ್ಲಿ ಮಳೆಯಿಂದಾಗಿ ಒಟ್ಟು 650 ಕಂಬಗಳು ಧರಾಶಾಹಿಯಾಗಿವೆ. ಅದರಲ್ಲಿ 653 ಕಂಬಗಳನ್ನು ಮರು ಸ್ಥಾಪಿಸಲಾಗಿದೆ. ಒಟ್ಟು 31 ಟ್ರಾನ್ಸ್ಫಾರ್ಮರ್‌ಗಳು ಹಾನಿಯಾಗಿದ್ದು. ಹಾಳಾಗಿರುವ ಒಟ್ಟು ಟ್ರಾನ್ಸ್ಫಾರ್ಮರ್‌ಗಳನ್ನು ಮರು ಸ್ಥಾಪಿಸಲಾಗಿದೆ. 16.50 ಕಿಲೋ ಮೀಟರ್ ಉದ್ದದ ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿದ್ದವು, ಅದರಲ್ಲಿ 16.20 ಕಿಲೋ ಮೀಟರ್ ಉದ್ದದ ವಿದ್ಯುತ್ ತಂತಿಗಳನ್ನು ಪುನಃ ಅಳವಡಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹೊರತುಪಡಿಸಿದರೆ ಯಲ್ಲಾಪುರದ ಅತ್ಯಂತ ಹೆಚ್ಚು ಹೆಸ್ಕಾಂ ಉಪ ವಿಭಾಗದಲ್ಲಿ ಹಾನಿಯಾಗಿದೆ.
ಇದ್ದಿರುವ ಸಿಬ್ಬಂದಿಗಳನ್ನೇ ಮತ್ತು ಗುತ್ತಿಗೆ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಯಾವುದೇ ಅಡಚಣೆ ಬಾರದಂತೆ ಅತಿ ಹೆಚ್ಚು ಮಳೆ ಸುರಿದ ಸಂದರ್ಭದಲ್ಲಿಯೂ ಕೂಡ ಹೆಸ್ಕಾಂ ಇಲಾಖೆ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ0ತೆ ಸೇವೆ ಸಲ್ಲಿಸಿದೆ ಆದರೂ ಕೂಡ ಗ್ರಾಮೀಣ ಭಾಗದಲ್ಲಿ ಕೆಲವು ಕೊರತೆಗಳು ಈಗಲೂ ಕೂಡ ಕಂಡುಬರುತ್ತಿವೆ.