ಶಿರಸಿ: ಮಣಿಪುರದಲ್ಲಿ ನಡೆದ ಶತಮಾನದ ಹೇಯ ಕೃತ್ಯವನ್ನು ಪ್ರತಿಯೊಬ್ಬ ಮಾನವ ಜೀವಿಯೂ ಖಂಡಿಸಬೇಕಾಗಿದೆ. ಒಂದು ಕುಟುಂಬವನ್ನು ಸರ್ವನಾಶ ಮಾಡಿ ಇಡೀ ಸಮಾಜವೇ ತಲೆತಗ್ಗಿಸುವಂತೆ ಒಂದು ಅಮಾಯಕ ಹೆಣ್ಣನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ದುಷ್ಟರು ಇನ್ನೂ ಬದುಕಿರುವುದು ನಮ್ಮ ನ್ಯಾಯಾಂಗವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮಾ ಆರ್.ಉಗ್ರಾಣಕರ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಮೂರು ತಿಂಗಳಿನಿ0ದ ಹತ್ತಿ ಉರಿಯುತ್ತಿರುವ ಮಣಿಪುರ ಇತ್ತೀಚಿನ ದೇಶದ ರಾಜಕೀಯ ಅರಾಜಕತೆಯ ಸಂಕೇತವಾಗಿದೆ. ಯಾವ ದೇಶದಲ್ಲಿ ಹೆಣ್ಣನ್ನು ದೇವತೆಯಾಗಿ, ತಾಯಿಯಾಗಿ, ಪ್ರಕೃತಿ ಎಂದು ಪೂಜಿಸುತ್ತಿದ್ದರೋ, ಯಾವ ದೇಶದಲ್ಲಿ ನ್ಯಾಯವನ್ನು ದೇವತೆಯಾಗಿ ಗೌರವಿಸುತ್ತಿದ್ದರೋ, ಯಾವ ದೇಶ ವಿಶ್ವಕ್ಕೆ ಮಾದರಿಯಾದ ಪ್ರಜಾಸತ್ತತೆಯ ದೇಶ ಎಂದು ಹೋಗಳಿಸಿಕೊಂಡಿತ್ತೋ, ಆ ದೇಶದ ಒಂದೊoದೇ ರಾಜ್ಯಗಳು ಕೋಮು ದಳ್ಳುರಿಗೆ ಸಿಲುಕಿ ನಲುಗುತ್ತಿದೆ. ಕಣ್ಣಿದ್ದೂ ಕುರುಡರಂತೆ ವರ್ತಿಸುವ ಅಲ್ಲಿಯ ಪೊಲೀಸ್ ಇಲಾಖೆಯನ್ನು ನೋಡಿದರೆ ಆಡಳಿತಾರೂಢ ಬಿಜೆಪಿ ಸರ್ಕಾರದ ದುರಾವಸ್ಥೆಯ ಅರಿವಾಗುತ್ತದೆ ಎಂದಿದ್ದಾರೆ.
ರಾಜಕೀಯ ಪಕ್ಷಗಳು ಯಾವುದೇ ಆಗಿರಲಿ, ಮಾನವೀಯತೆಯನ್ನು ಮರೆತರೆ ಜನರ ಹಿತ ಕಾಪಾಡಲು ಸಾಧ್ಯವಿಲ್ಲ. ಅನೇಕ ಸಂದರ್ಭಗಳಲ್ಲಿ ಚಿಕ್ಕ ವಿಷಯವನ್ನು ರಾಜಕೀಯಕ್ಕಾಗಿ ಹೊತ್ತಿ ಉರಿಯುವಂತೆ ಪ್ರೇರೇಪಿಸುತ್ತಿದ್ದ ಬಿಜೆಪಿ ಸರಕಾರ ರಾಮ ರಾಜ್ಯದ ಜಪ ಮಾಡುತ್ತಾ ರಾವಣ ರಾಜ್ಯ ನಡೆಸುತ್ತಿದೆ. ದೇಶದ ಮಹಿಳೆಯರಿಗೆ ಆದರ್ಶವಾಗಿರಬೇಕಾದ ಕೇಂದ್ರದ ಮಹಿಳಾ ಸಚಿವರು ಇಂದೇಕೋ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು ತಕ್ಷಣ ತಮ್ಮದೇ ಸರಕಾರದ ಮುಖ್ಯಮಂತ್ರಿಗಳಿಗೆ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ದೇಶಕ್ಕೆ ಮಾದರಿಯಾಗುವ ಶಿಕ್ಷೆ ವಿಧಿಸುವಂತೆ ಆದೇಶಿಸಿ ದೇಶದ ಮಹಿಳೆಯರಿಗೆ ನಿಜವಾದ ರಕ್ಷಣೆ ನೀಡಿ ನಿಜವಾದ ಕಾಳಜಿಯನ್ನು ನಿರೂಪಿಸಿ. ತಕ್ಷಣ ಸಂತ್ರಸ್ತ ಮಹಿಳೆಗೆ ರಕ್ಷಣೆ ಮತ್ತು ಅಪರಾಧಿಗಳನ್ನು ಶಿಕ್ಷಿಸಿ ದೇಶದ ಕಾನೂನು ಸುಭದ್ರವಾಗಿದೆ ಎಂದು ಸ್ಪಷ್ಟಪಡಿಸಬೇಕಿದೆ ಎಂದು ತಿಳಿಸಿದ್ದಾರೆ.