ಯಲ್ಲಾಪುರ: ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ, ಅಂಕಣಕಾರ, ಯಕ್ಷಗಾನ ಅರ್ಥಧಾರಿ, ವಿಮರ್ಶಕ, ಪತ್ರಕರ್ತರಾಗಿದ್ದ ಅನಂತ ಮಹಾಬಲೇಶ್ವರ ವೈದ್ಯ ಸೋಮವಾರ ನಸುಕಿನಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ದಿವಂಗತರು ಕನ್ನಡ ಹಾಗೂ ಸಂಸ್ಕೃತದಲ್ಲಿ, ರಾಮಾಯಣ, ಮಹಾಭಾರತದ ಕುರಿತು ಸಾಕಷ್ಟು ಪ್ರಭುತ್ವ ಸಾಧಿಸಿದ್ದರು. ದಕ್ಷಿಣೋತ್ತರ ಕನ್ನಡದ ಯಕ್ಷಗಾನ ಆರ್ಥಧಾರಿಯಾಗಿ, ಸಾಹಿತ್ಯ ರತ್ನ ಬಿರುದು ಪಡೆದು ಯಕ್ಷಗಾನ ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಪ್ರಕಟಿಸಿದ್ದರು. ಜ್ಞಾನಯಜ್ಞ, ಶ್ರೀಕೃಷ್ಣ ಸಂಧಾನ, ಪಾದುಕಾ ಪ್ರಧಾನ ಮುಂತಾದ ಯಕ್ಷಗಾನ ಕೃತಿಗಳನ್ನು ರಚಿಸಿದ್ದರು. ಶೇಣಿ ಗೋಪಾಲಕೃಷ್ಣ ಭಟ್‌ರ ಚಿಂತನೆಗಳನ್ನು ಸಂಗ್ರಹಿಸಿ ಜ್ಞಾನಯಜ್ಞ ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಕೆಲವು ವರ್ಷಗಳ ಕಾಲ ಯಲ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಹೊನ್ನಾವರದ ಕೆರೆಮನೆ ಯಕ್ಷಗಾನ ಮಂಡಳಿಯಿ0ದ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಸಂದರ್ಭದಲ್ಲಿ ಗೌರವ ಸನ್ಮಾನ ದೊರೆತಿದೆ, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಅವರಿಂದ ಹವ್ಯಕ ಸಾಧಕರೆಂದು, ಕಸಾಪ ಯಲ್ಲಾಪುರದಿಂದ ಗೌರವ ಸನ್ಮಾನ, ಸಾವಣ್ಣ ಪ್ರಕಾಶನ ಬೆಂಗಳೂರು ಮತ್ತು ಉಡುಪಿ ಮತ್ತು ಭ್ರಹ್ಮಾವರ ಕಸಾಪ ದಿಂದ `ನಿಷ್ಕಾಮ ಪ್ರಶಸ್ತಿ ನೀಡಿ ಸನ್ಮಾನ ಪಡೆದಿದ್ದರು. ಮೂಲತಃ ಅಂಕೋಲಾ ತಾಲೂಕಿನ ವೈದ್ಯ ಹೆಗ್ಗಾರಿನವರಾದ ವೈದ್ಯ ಅವರು ಯಲ್ಲಾಪುರಕ್ಕೆ ಬಂದು ಪ್ರಕಾಶ ಮುದ್ರಣಾಲಯ ಸ್ಥಾಪಿಸಿದ್ದರು. ಪತ್ನಿ, ಪುತ್ರ, ಈರ್ವರು ಪುತ್ರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.