ಗೋಕರ್ಣ: ಆಧುನಿಕ ಸಮಾಜ ಮನುಷ್ಯರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ ವೇದಗಳ ದೃಷ್ಟಿ ಹಾಗಿಲ್ಲ. ಮನುಷ್ಯರಿಗೆ ಒಳಿತಾಗಲಿ ಎಂದು ಹಾರೈಸಿದ ಉಸಿರಿನಲ್ಲೇ ಎಲ್ಲ ಚತುಷ್ಪದಿಗಳಿಗೂ (ಪ್ರಾಣಿಗಳಿಗೆ) ಒಳಿತಾಗಲಿ ಎಂದು ಹಾರೈಸುತ್ತದೆ. ಸರ್ವರಿಗೂ ಒಳಿತು ಬಯಸುವುದೇ ವೇದದ ಸಾರ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ‘ಶನ್ನೋ ಅಸ್ತು ದ್ವಿಪದೇ, ಶಂ ಚತುಷ್ಪದೇ’ ಎಂಬ ವಿಷಯದ ಬಗ್ಗೆ ಶ್ರೀಸಂದೇಶ ನೀಡಿ, ಮನುಷ್ಯ- ಪ್ರಾಣಿಗಳಿಗೆ ಒಳಿತಾಗಲಿ. ಮೃಗ- ಪಕ್ಷಿಗಳಿಗೆ ಒಳ್ಳೆಯದಾಗಬೇಕು. ಪಶುಪಕ್ಷಿ, ಮರಗಿಡಗಳು, ಕ್ರಿಮಿಕೀಟಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸುವ ವೈಶಾಲ್ಯತೆ ವೇದಗಳಲ್ಲಿದೆ ಎಂದು ವಿಶ್ಲೇಷಿಸಿದರು.
ಛಂದೋಪನಿಷತ್ತಿನಿ0ದ ತಿಳಿದು ಬರುವಂತೆ ವಿಶ್ವವೆಲ್ಲ ಲೀನವಾಗುವ ಒಂದು ಬಿಂದು ಅಥವಾ ಪರಮಾತ್ಮ ಎಂಬ ತತ್ಪ ಮಾತ್ರ ಆರಂಭದಲ್ಲಿತ್ತು. ಆಗ ಪರಮಾತ್ಮನಿಗೆ ಹಲವು ಪೀಳಿಗೆಗಳಿಗೆ ನಾನು ಜನಕನಾಗುತ್ತೇನೆ ಎಂಬ ಭಾವನೆ ಬಂತು. ಕೋಟಿ ರೂಪಗಳಲ್ಲಿ ಅನಂತವಾಗಿ ದೇವರು ಹೊರಹೊಮ್ಮಿದ್ದೇ ವಿಶ್ವದ ವಿಕಾಸಕ್ಕೆ ಕಾರಣವಾಯಿತು. ನಮ್ಮ ಸುತ್ತ ಮುತ್ತ ಕಾಣುವ ಪ್ರತಿಯೊಂದೂ ದೇವರ ಏಕಪಾತ್ರಾಭಿನಯದ ವೈವಿಧ್ಯಮಯ ರೂಪಗಳು. 33 ಕೋಟಿ ದೇವತೆಗಳು ಒಬ್ಬ ಪರಮಾತ್ಮನ ರೂಪ ಎಂದು ಬಣ್ಣಿಸಿದರು.
‘ನಾನು’ ಎನ್ನುವುದಕ್ಕೆ ಶಕ್ತಿ ಇಲ್ಲ. ‘ನಾವು’ ಎಂಬ ಸಮಷ್ಟಿ ಅತ್ಯಂತ ಬಲಿಷ್ಠ. ಎಲ್ಲರೂ ಕೂಡಿ ಬಾಳಬೇಕು. ಒಂಟಿತನ ಎನ್ನುವುದು ಬದುಕೇ ಅಲ್ಲ; ಎಲ್ಲರೂ ಜತೆಯಾಗಿ ಬೆಳೆಯಬೇಕು. ಒಂಟಿಯಾಗಿ ಬೆಳೆದರೆ ವಿಶ್ವದ ಜತೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಜತೆಗೆ ಗೋವು, ಇತರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ತುಳಸಿ, ಗರಿಕೆ ಹೀಗೆ ಗಿಡಗಂಟಿಗಳು ಕೂಡಾ ನಮ್ಮ ಜತೆಜತೆಗೆ ಬೆಳೆಯುವುದೇ ಪರಿಪೂರ್ಣ ಬದುಕು ಎಂದು ವಿವರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‌ಜಿ ಭಟ್, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ನೀಲಕಂಠ ಯಾಜಿ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಜಿ.ಪ್ರಸನ್ನ ಕುಮಾರ್, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಮತ್ತಿತರರು ಉಪಸ್ಥಿತರಿದ್ದರು.