ಶಿರಸಿ: ಪರಿವಾರ ಸಹಕಾರಿ ಸಂಘ ಆರಂಭಿಸಲು ಲಾಭವೊಂದೇ ಉದ್ದೇಶವಲ್ಲ. ಸದಸ್ಯರ ಏಳ್ಗೆಗೆ ಸರ್ವಾಂಗೀಣ ಸಹಕಾರ ಕೊಡುವದು ನಮ್ಮ ಪ್ರಮುಖ ಆಶಯ ಎಂದು ಪರಿವಾರ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.
ಸೋಮವಾರ ಅವರು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪರಿವಾರ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಹಕಾರಿ ಸಂಘದಲ್ಲಿ 876 ಸದಸ್ಯರಿದ್ದು, ದಿನದಿಂದ ದಿನಕ್ಕೆ ವಿಶ್ವಾಸರ್ಹತೆ ಹೆಚ್ಚಿಸಿಕೊಳ್ಳುತ್ತ ಮುನ್ನಡೆದಿದೆ. ಸಾಲ ಪಡೆದ ಸದಸ್ಯರು ಕಟ್ ಬಾಕಿ ಆಗಿಲ್ಲ. ಬಡ್ಡಿ, ಅಸಲು ಸಹಿತ ವಾಪಸ್ ಮಾಡುತ್ತಿದ್ದಾರೆ. ಠೇವೂ ಹೆಚ್ಚುತ್ತಿದೆ ಎಂದೂ ಹರ್ಷ ವ್ಯಕ್ತಪಡಿಸಿ, ಸಂಸ್ಥೆ ಆರ್ ಬಿಐ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದೆ. ಸಂಸ್ಥೆ ಆರಂಭವಾಗಿ ಕೇವಲ ಏಳು ತಿಂಗಳಾಗಿದೆ. ಆರಂಭದಿಂದ ಈವರೆಗಿನ ದಾರಿ ಸಮಾಧಾನಕರವಿದ್ದು, ಇನ್ನು ಮುಂದೆ ಎಲ್ಲರೂ ಸೇರಿ ಇನ್ನಷ್ಟು ಬೆಳೆಸಬೇಕಿದೆ. ಎಲ್ಲ ಪರಿವಾರಗಳ ಸಂಸ್ಥೆ ಆಗಬೇಕು. ಇದಕ್ಕೆ ಎಲ್ಲರ ಸಹಕಾರ, ಸಹಭಾಗಿತ್ವ ಅಗತ್ಯ ಎಂದರು.
ವಿಸ್ತಾರ ಮೀಡಿಯಾದ ಸಿಇಓ, ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ಪ್ರತಿಯೊಬ್ಬರಲ್ಲೂ ಆರ್ಥಿಕ ಶಿಸ್ತು ಇದ್ದರೆ ಸಾಧನೆ ಸಾಧ್ಯ. ಗದಗದಲ್ಲಿ ಆರಂಭವಾದ ಸಹಕಾರ ಚಳುವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆದಿದೆ. ಪರಿವಾರ ಸಹಕಾರಿ ಸಂಘ ಕೂಡ ಜನರ ವಿಶ್ವಾಸ ಗಳಿಸಿ ಬೆಳೆಯುತ್ತಿದೆ ಎಂದರು.
ಈ ವೇಳೆ ಸಂಸ್ಥೆ ಉಪಾಧ್ಯಕ್ಷ ಎಚ್.ವಿ.ಧರ್ಮೇಶ, ನಿರ್ದೇಶಕರಾದ ಗುರುನಾಥ ದಾನಪ್ಪನವರ, ಎಂ.ಎಂ.ಭಟ್ಟ ಕಾರೆಕೊಪ್ಪ, ರಾಮಚಂದ್ರ ಹೆಗಡೆ, ಪಿ.ಡಿ.ಮದ್ಗುಣಿ, ಕಾರ್ಯನಿರ್ವಾಹಕ ದೀಪಕ್ ಹೆಗಡೆ ಇತರರು ಇದ್ದರು. ಗಿರಿಧರ ಕಬ್ನಳ್ಳಿ ವಂದಿಸಿದರು.