Slide
Slide
Slide
previous arrow
next arrow

ಶಿರಸಿ ನಗರದ ಸ್ಪರ್ಧಾತ್ಮಕ ಶಿಕ್ಷಣಾಸಕ್ತರಿಗೆ ಸದಾವಕಾಶ ನೀಡುವ ಶಿರಸಿ ಲಯನ್ಸ್ ಅಕಾಡೆಮಿ- ವಿಶೇಷ ಲೇಖನ

300x250 AD

ಮಲೆನಾಡ ಸುಂದರ ಪರಿಸರದ, ಪಶ್ಚಿಮ ಘಟ್ಟದ ಅಡಿಕೆ, ತೆಂಗು, ಬಾಳೆ ತೋಟಗಳ ಹಚ್ಚ ಹಸಿರಿನ ಪೃಕೃತಿ ಸೌಂದರ್ಯದ ಮಧ್ಯೆ ಬುದ್ಧಿವಂತ ಜನ ಇರುವ ಪ್ರದೇಶ ಎಂದೇ ಪರಿಚಿತರಾಗಿರುವ ತೋಟದ ಸೀಮೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳು ಶಿಕ್ಷಣ ಕ್ಷೇತ್ರದಲ್ಲಿಯೂ ಹೆಸರುವಾಸಿಯಾಗಿವೆ. ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿ ಸಮೂಹ ಇದಕ್ಕೆ ಸಾಕ್ಷಿಯಾಗಿವೆ. ಪ್ರಾಥಮಿಕ-ಪ್ರೌಢ ಶಿಕ್ಷಣ ಅಧ್ಯಯನದಲ್ಲಿ ಸಾಟಿಯಿಲ್ಲದ ಫಲಿತಾಂಶ ನೀಡುವ ಮೇಧಾವಿ ವಿದ್ಯಾರ್ಥಿಗಳು ತದನಂತರ PU ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ವಿಶ್ವದ ಎಲ್ಲ ದೇಶಗಳಲ್ಲಿ, ಬಹುಶಃ ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಮಾಡಿರುವ ಅಗ್ರಮಾನ್ಯ ಸಾಧನೆ ಈ ಭಾಗದ ಜನರ ಕ್ಷಮತೆಗೆ ಸಾಕ್ಷಿ.

PU ಪರೀಕ್ಷೆಗಳಲ್ಲಿ ಅದ್ಭುತವಾಗಿ ಗುಣಗಳನ್ನು ಪಡೆದುಕೊಂಡಿರುವ ನಮ್ಮ ಬಹಳಷ್ಟು ವಿದ್ಯಾರ್ಥಿಗಳು NEET, KCET, JEE ಮುಂತಾದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ ದಯನೀಯ ಸೋಲು ಅನುಭವಿಸುತ್ತಿರುವ ನಿದರ್ಶನ ನಮ್ಮ ಎದುರಿಗಿದೆ. ಕಳೆದ ಹಲವಾರು ವರ್ಷಗಳ ಪ್ರವೇಶ ಪರೀಕ್ಷೆಗಳ ಫಲಿತಾಂಶವನ್ನು ಅವಲೋಕಿಸಿದಾಗ ನಮ್ಮ ಅರಿವಿಗೆ ತಿಳಿದಿದ್ದೇನೆಂದರೆ, ಅವರು ದೊಡ್ಡ ದೊಡ್ಡ ನಗರಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆ ನೀಡುವಲ್ಲಿ ಎಡವುತ್ತಿದ್ದಾರೆ. ಈ ಭಾಗದ ಕೆಲವು ಸಿರಿವಂತ ಹಾಗೂ ಮೇಲ್ಮಧ್ಯಮ ಪಾಲಕರು ಹೆಚ್ಚಿನ ತರಬೇತಿಗಾಗಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮಂಗಳೂರು ಮುಂತಾದ ನಗರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿದರೂ, ನಾನಾ ಕಾರಣದಿಂದ ನೀರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ.

ತರಬೇತಿಗಾಗಿ ಅಕ್ಕಪಕ್ಕದ ಜಿಲ್ಲೆಗಳ ಹೆಸರಾಂತ ಕಾಲೇಜು ಅಥವಾ ಟ್ಯೂಷನ ಕೇಂದ್ರಗಳಿಗೆ ಲಕ್ಷಾಂತರ ಹಣ ವ್ಯಯಿಸಿ ಕಳುಹಿಸಿದ ನಂತರವೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎಂಬುದು ಪಾಲಕರ ಅಳಲು ಮತ್ತು ಗೊಂದಲ. ಪಾಲಕರ ಆರೈಕೆಯಲ್ಲಿ ಹಾಯಾಗಿ ಬೆಳೆದ ಮಕ್ಕಳಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ವಿಶೇಷವಾಗಿ ಊಟ-ತಿಂಡಿ-ಹವಾಮಾನ, ನಮ್ಮ ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿರೋದು ಬಹುಶಃ ನಿಜ. ಕ್ಲಾಸ್’ಗಳು, ದೈನಂದಿನ ಪರೀಕ್ಷೆಗಳು, ನೋಟ್ಸ್’ಗಳ ಒತ್ತಡ ವಿಪರೀತ. ಕಾಲೇಜಿನ ಸಮಯ ನಿರ್ವಹಣೆ ಸಹ ಸಮಸ್ಯೆ ಒಡ್ಡಬಹುದು. ಹಿರಿಯ ವಿದ್ಯಾರ್ಥಿಗಳ ಭಯ ಹುಟ್ಟಿಸುವ ಮಾತುಕತೆ ಹೊಸ ಚಿಂತೆಗೆ ದೂಡುತ್ತವೆ. ನಮ್ಮವರಲ್ಲದ ಅಪರಿಚಿತ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯುವದೂ ಮತ್ತೊಂದು ಕಷ್ಟ. ಮನೆಯಿಂದ ದೂರವಾಗಿ ಒಂಟಿತನ ಭಾದಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟೆಲ್ಲಾ ಹಣ ಖರ್ಚು ಮಾಡಿದ ನಂತರವೂ ನಿರೀಕ್ಷಿತ ಫಲಿತಾಂಶ ಬರದಿದ್ದರೆ ಎಂಬ ಚಿಂತೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರೊಂದಿಗೆ ಹೇಳಿಕೊಳ್ಳಲಾಗದ ವೈಯಕ್ತಿಕ ಕಾರಣಗಳೂ ಇರಬಹುದು. ಈ ಎಲ್ಲ ಕಾರಣಗಳು ಅಂತಿಮ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ಸಾಧ್ಯತೆಗಳಿವೆ.
ಈ ಎಲ್ಲ ವಿಷಯಗಳನ್ನು ಸಮಾನಮನಸ್ಕ ಪಾಲಕರು, ಸ್ನೇಹಿತರು, ಶಿಕ್ಷಣತಜ್ಞರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಿದಾಗ ಶಿರಸಿಯಲ್ಲಿ ದಕ್ಷಿಣ ಕನ್ನಡ ಮಾದರಿಯ ವೃತ್ತಿಪರ ತರಬೇತಿ ಕೇಂದ್ರ ಮತ್ತು PU ಕಾಲೇಜುಗಳ ಕೊರತೆ ಇದೆ. ಇದು ನಮ್ಮ ಭಾಗದಲ್ಲಿ ಸಾಧ್ಯವಾದರೆ ಮೇಲಿನ ಬಹಳಷ್ಟು ಸಮಸ್ಯೆಗಳಿಗೆ ಸಮಾಧಾನ ದೊರಕಬಹುದು ಎಂಬ ಸಾಮಾನ್ಯ ಅಭಿಪ್ರಾಯ ಹೊರಹೊಮ್ಮಿತು.

ಆದರೆ ಇಂದಿನ ದಿನಮಾನದಲ್ಲಿ ಕಾಲೇಜು ಎಂದರೆ ಕೋಟಿ ಕೋಟಿಗಳ ವ್ಯವಹಾರ. ಅತ್ತ್ಯುತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಪ್ರತಿಭಾವಂತ-ಅರ್ಪಣಾ ಭಾವದ ಉಪನ್ಯಾಸಕರು ತೀರಾ ಅವಶ್ಯಕ. ಪಾಲಕರ ಸಹಾಯ-ಸಹಕಾರ -ವಿಶ್ವಾಸ ಅಗತ್ಯ. ವಿದ್ಯಾರ್ಥಿಗಳ ನಿರೀಕ್ಷೆ, ನಿರಾಸೆ ಆಗದಂತೆ ಸಂಸ್ಥೆ ನಡೆಸುವ ಬಹು ದೊಡ್ಡ ಹೊಣೆಗಾರಿಕೆ. ಬದಲಾವಣೆಬೇಕು, ಅದು ನಿರಂತರ ಎಂಬ ಮಾತನ್ನು ಒಪ್ಪಿಕೊಳ್ಳುವ ಎಲ್ಲರಿಗೂ ರಾತ್ರಿ ಬೆಳಗಾಗುವದರ ಒಳಗೆ ಅದು ಸಾಧ್ಯವಾಗಬೇಕೆಂಬ ಅಭಿಲಾಷೆ. ಇಂತಹ ಹಲವು ಕಾರಣಗಳಿಂದ ನಮ್ಮ ಈ ಕನಸು ನನಸಾಗುವ ಸಮಯ ಮುಂದೆ ಮುಂದೆ ಹೋಗುತ್ತಿರುವ ಸಂಧರ್ಭದಲ್ಲಿ ಇದೀಗ ಮತ್ತೆ ಪಾಲಕರು ಹಾಗೂ ವಿದ್ಯಾರ್ಥಿಗಳ ಒತ್ತಾಸೆ ಹಾಗೂ ಸಾತ್ತ್ವಿಕ ಒತ್ತಾಯ ನಮಗೆ ನಮ್ಮ ನಿಲುವಿನ ಬಗ್ಗೆ ಮರು ಯೋಚನೆ ಮಾಡುವಂತೆ ಅನಿಸಿ, ಹೊಸ ಯೋಜನೆಯೊಂದಿಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇವೆ.

ಕರ್ನಾಟಕದ ಹೆಸರಾಂತ ಶಿಕ್ಷಣ ಸಂಸ್ಥೆಯಾಗಿರುವ BASE, ಬೆಂಗಳೂರು ಇವರೊಂದಿಗೆ ಶಿರಸಿ ಲಯನ್ಸ್ ಅಕಾಡೆಮಿ ಕೈಜೋಡಿಸಿದೆ. ದೇಶದ ಹಾಗೂ ರಾಜ್ಯದ ಹೆಸರಾಂತ ವೈದ್ಯಕೀಯ ಹಾಗೂ ಎಂಜಿನಿಯರಿಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು NEET (National Eligibility Cum Entrance Test) , JEE( Joint Engeneering Entrance Test) ಹಾಗೂ KCET (Karnataka Common Entrance Test) ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ BASE ಸಂಸ್ಥೆ ಕಳೆದ ಹತ್ತು ಹಲವಾರು ವರ್ಷಗಳಿಂದ ಈ ಪರೀಕ್ಷೆಗಳಲ್ಲಿ ಅದ್ಭುತವಾದ ಯಶಸ್ಸನ್ನು ಸಾಧಿಸಿದೆ. ಇಲ್ಲಿ ತರಬೇತಿ ಪಡೆದ ಸಹಸ್ರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶದ ಸುಪ್ರಸಿದ್ಧ ವೈದ್ಯಕೀಯ ಕಾಲೇಜುಗಳು, IIT, NIT ಗಳಲ್ಲಿ ಪ್ರವೇಶ ಪಡೆದು ಸಾಧನೆಗೈದಿದ್ದಾರೆ. ಇಂತಹ ಹೆಸರಾಂತ ಸಂಸ್ಥೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕರೆ ತರುವ ಸಾಹಸವನ್ನು ಶಿರಸಿ ಲಯನ್ಸ್ ಅಕಾಡೆಮಿ ಮಾಡಿದೆ. ಶಿರಸಿ ಲಯನ್ಸ್ ಅಕಾಡೆಮಿ ಇದು ಶಿಕ್ಷಣ ತಜ್ಞರು ಹಾಗೂ ವೃತ್ತಿಪರರನ್ನು ಒಳಗೊಂಡ ಸಂಸ್ಥೆಯಾಗಿದ್ದು ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೇಶದ ಹೆಸರಾಂತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರಕಿಸಲು ಪ್ರಯತ್ನಿಸುವ ಮತ್ತು ಅದಕ್ಕೆ ಪೂರಕವಾದ ಸಕಲ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧವಾಗಿದೆ. ನಗರ ಪ್ರದೇಶಗಳಲ್ಲಿ ಲಭ್ಯವಿರುವ ಇಂತಹ ತರಬೇತಿ ನಮ್ಮ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲುಪಬೇಕು ಎಂಬ ಕಳಕಳಿಯ ಜೊತೆಗೆ ಈ ತರಬೇತಿಯನ್ನು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ತಲುಪಿಸಬೇಕೆಂಬ ಸಾಮಾಜಿಕ ಬದ್ಧತೆ ಶಿರಸಿ ಲಯನ್ಸ್ ಅಕಾಡೆಮಿಯ ಪ್ರಥಮ ಪ್ರಾಶಸ್ತ್ಯವಾಗಿದೆ.
ಈಗಾಗಲೇ 2023-24ನೇ ಸಾಲಿನಿಂದ ಕರ್ನಾಟಕ ಸರಕಾರದ ಪದವಿಪೂರ್ವ ಶಿಕ್ಷಣ ಇಲಾಖೆಯ ಸಂಪೂರ್ಣ ಅನುಮೋದನೆಯಿಂದ ಆರಂಭವಾಗಿರುವ ಜಿಲ್ಲೆಯ ಅತ್ಯಂತ ಸುಸಜ್ಜಿತ, ಸಂಪೂರ್ಣ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ ಪಿ.ಯು. ಕಾಲೇಜು ( ಕಾಲೇಜು ಸಂಕೇತ ಸಂಖ್ಯೆ ಕ್ಯೂಕ್ಯೂ 0127) ಉನ್ನತ ಗುಣಮಟ್ಟದ ಪದವಿ ಪೂರ್ವ ಶಿಕ್ಷಣ ಪ್ರಸಾರಕ್ಕೆ ಸಜ್ಜಾಗಿ ನಿಂತಿದೆ.
ಅತಿ ಶೀಘ್ರದಲ್ಲಿ ಶಿರಸಿ ನಗರದ ಎಲ್ಲಾ ಕಾಲೇಜುಗಳ ಪಿ.ಯು. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿರಸಿ ಲಯನ್ಸ ಅಕಾಡೆಮಿ ಬೇಸ್ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಲಿರುವ ಸ್ಪರ್ಧಾತ್ಮಕ ಪರೀಕ್ಷಾ ತರಗತಿಗಳು ಕಾರ್ಯಾರಂಭ ಮಾಡುತ್ತಲಿದೆ.

300x250 AD

ದೇಶದ ಭವ್ಯ ಭವಿಷ್ಯ ಯುವಜನತೆಯಲ್ಲಿದೆ. ನಮ್ಮ ಹೆಮ್ಮೆಯ ಭಾರತ, ಶ್ರೇಷ್ಟ ಭಾರತ ಆಗುವಲ್ಲಿ ಯುವಕರ-ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ. ವೈಯಕ್ತಿಕ ಬದುಕು ಹಾಗೂ ರಾಷ್ಟ್ರ ನಿರ್ಮಾಣ ಒಂದಕ್ಕೊಂದು ಪೂರಕ. ಪರಿಪೂರ್ಣತೆ ಸಾಧಿಸವದು ಗುರಿಯಾಗಿರಬೇಕು. ಕಾಲ ಯಾರಿಗೂ ಕಾಯುವದಿಲ್ಲ. ಸುಂದರ ನಾಳೆ, ವರ್ತಮಾನದ ನಮ್ಮ ಪ್ರಯತ್ನಶೀಲತೆ ಮೇಲೆ ಅವಲಂಬಿತ. ಹೊಸ ಶಿಕ್ಷಣ ನೀತಿ, ಅಧ್ಯಯನ-ಅಧ್ಯಾಪನ-ಕೌಶಲ್ಯ-ಸಂಸ್ಕಾರ ಯುಕ್ತ ಮೌಲ್ಯ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದು, ಕಳೆದ 50 ವರ್ಷಗಳ ಶಿರಸಿ ಲಯನ್ಸ್ ಸಂಸ್ಥೆಯ ಪಯಣ ಕೂಡ ಬಹುಶಃ ಈ ದಿಕ್ಕಿನಲ್ಲಿಯೇ ಸಾಗಿದೆ. ನಮ್ಮ ಮುಂಬರುವ ಯೋಜನೆಗಳು ಕೂಡ ಈ ಹಿನ್ನೆಲೆಯಲ್ಲಿಯೇ ಸಾಗಲಿದೆ ಎಂಬ ಆತ್ಮವಿಶ್ವಾಸ ನಮ್ಮದು ಕೂಡ. ಈ ಭಾಗದ ಪಾಲಕರ, ವಿದ್ಯಾರ್ಥಿಗಳ ನಿರಂತರ ಸಹಾಯ, ಬೆಂಬಲ ಸಹಕಾರವನ್ನು ಕೋರುವ ಮೂಲಕ ವಿನೂತನ ಯೋಜನೆಯ ಸಾಕಾರ-ಯಶಸ್ಸಿಗೆ ತಾವೆಲ್ಲರೂ ತುಂಬು ಮನಸ್ಸಿನಿಂದ ಆಶೀರ್ವದಿಸಬೇಕೆಂಬ ಕೋರಿಕೆ.

ಮರೆಯುವ ಮುನ್ನ : ಇತ್ತೀಚೆಗೆ ಧಾರವಾಡದಲ್ಲಿ ಸಂಪನ್ನಗೊಂಡ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪದೇ ಪದೇ ಕೇಳಿ ಬಂದ ಕವಿತೆ : “ಈ ದೇಶದ ಮಣ್ಣು ಗಂಧವಿದ್ದಂತೆ, ಇಲ್ಲಿಯ ಪ್ರತಿ ಭಾಗವೂ ತಪೋಭೂಮಿ,ಪ್ರತಿ ಬಾಲಕಿ ದೇವಿಯಂತೆ, ಪ್ರತಿ ಬಾಲಕ ಶ್ರೀರಾಮನಂತೆ” .

ಲಯನ್ ಪ್ರೊ. ರವಿ ನಾಯಕ್
ನಿವೃತ್ತ ಪ್ರಾಚಾರ್ಯರು, ಎಂ.ಇ.ಎಸ್. ಕಾಮರ್ಸ ಕಾಲೇಜ್, ಶಿರಸಿ
ಗೌರವ ಪ್ರಧಾನ ಕಾರ್ಯದರ್ಶಿಗಳು, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ(ರಿ), ಶಿರಸಿ

Share This
300x250 AD
300x250 AD
300x250 AD
Back to top