ಶಿರಸಿ: ಶಿರಸಿ, ಸಿದ್ದಾಪುರ ಮತ್ತು ಮುಂಡಗೋಡ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಎಲ್ಲಾ ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವು ಶಿರಸಿ ತಾಲೂಕಿನ ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಜು.21ರಂದು ಜರುಗಿತು. ಮೂರೂ ತಾಲೂಕುಗಳಿಂದ ಒಟ್ಟೂ 60 ದೈಹಿಕ ಶಿಕ್ಷಣ ಶಿಕ್ಷಕರು ಭಾಗಗೊಂಡು ಪ್ರಯೋಜನ ಪಡೆದರು.
ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಬಸವರಾಜ ಕಾರ್ಯಕ್ರಮವನ್ನು ಉದ್ಘಾಟಿಸಿ ದೈಹಿಕ ಶಿಕ್ಷಣವು ಎಲ್ಲಾ ಶಿಕ್ಷಣಗಳ ತಾಯಿಯಂತೆ. ಮಕ್ಕಳಿಗೆ ಮಾತೃ ಶಿಕ್ಷಣವನ್ನು ನೀಡುವ ಜವಾಬ್ದಾರಿ ಹೊತ್ತಿರುವ ನೀವೆಲ್ಲಾ ದಿನ-ದಿನಕ್ಕೆ ಬದಲಾಗುವ ಶಿಕ್ಷಣ ವ್ಯವಸ್ಥೆ ಹಾಗೂ ಆಟೋಟಗಳ ಹೊಸ ಹೊಸ ನಿಯಮಗಳನ್ನು ತಿಳಿದು ಅಂಕಣಕ್ಕೆ ಇಳಿಯಬೇಕು. ಅಚ್ಚುಕಟ್ಟಾದ ನಿರ್ಣಯವನ್ನು ನೀಡುವ ಮೂಲಕ ಇಲಾಖೆಯ ಗೌರವವನ್ನು ಎತ್ತಿ ಹಿಡಿಯುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಿ. ಗಣೇಶ, ಅಂಕಣಕ್ಕೆ ಅಂಜಿಕೆಯೊಂದಿಗೆ ಇಳಿದರೆ ನಾವು ಸಫಲರಾಗುವುದಿಲ್ಲ. ಧೈರ್ಯದಿಂದ ನಿಯಮ ಸಂಪೂರ್ಣ ಅರಿತು ನಡೆದರೆ ಸಾಧನೆಯನ್ನು ಮಾಡಬಹುದು ಎಂದರು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಅಶೋಕ ತಾರಿಕೊಪ್ಪ ಪ್ರಸ್ತಾವಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಭಾರತ ಸೇವಾದಳ, ತಾಲೂಕಾ ಅಧ್ಯಕ್ಷ ಅಶೋಕ ಬಜಂತ್ರಿ, ಭಾ.ಸೇ. ದಳ ಕೋಶಾಧ್ಯಕ್ಷ ಕುಮಾರ ಎಸ್. ನಾಯ್ಕ, ಜಿಲ್ಲಾ ಸಂಘಟಕರು ರಾಮಚಂದ್ರ ಹೆಗಡೆ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ ಭಟ್ಟ, ಯೋಗಾಸನ ಮತ್ತು ನಿರ್ಣಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಪ್ರೊಗ್ರೆಸ್ಸಿವ್ ಹೈಸ್ಕೂಲ್ ದೈಹಿಕ ಶಿಕ್ಷಕ ಮಂಜುನಾಥ ಅಳ್ಳೊಳ್ಳಿ, ಕಬ್ಬಡ್ಡಿ ಹಾಗೂ ಆಟದ ನಿಯಮ, ತಂತ್ರ ಇವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಎಂ.ಇ.ಎಸ್. ಪ್ರಾಥಮಿಕ ಶಾಲೆ ನಿವೃತ್ತ ದೈಹಿಕ ಶಿಕ್ಷಕ ಪ್ರಕಾಶ ಕರ್ಕೊಳ್ಳಿಇವರನ್ನು ಶಿರಸಿ ತಾಲೂಕಾವತಿಯಿಂದ ಸನ್ಮಾನಿಸಲಾಯಿತು. ಉದಯಕುಮಾರ ಎಸ್. ಹೆಗಡೆ ನಿರೂಪಿಸಿದರು. ಎಂ. ಎನ್. ಹೆಗಡೆ ವಂದನಾರ್ಪಣೆ ಮಾಡಿದರು. ರಾಯಪ್ಪಾ ಹುಲೇಕಲ್ ಶಾಲಾ ವಿದ್ಯಾರ್ಥಿನಿಯವರು ಪ್ರಾರ್ಥನೆ ಹಾಡಿದರು.