ಗೋಕರ್ಣ: ಮಳೆಗಾಲದಲ್ಲಿಯೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಗೋಕರ್ಣಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ಚಾರಣಕ್ಕೆ ಹೋಗಿ ದಾರಿ ತಪ್ಪಿಹೋಗಿ ವಾಪಸ್ಸು ಬರಲಾರದೇ ಪರದಾಡುತ್ತಿದ್ದ ಇಬ್ಬರು ಪ್ರವಾಸಿಗರನ್ನು ಪೊಲೀಸರು ಅವರನ್ನು ರಕ್ಷಿಸಿ ಕರೆತಂದ ಘಟನೆ ನಡೆದಿದೆ.
ಇಲ್ಲಿಗೆ ಆಗಮಿಸಿದ್ದ ಹೈದರಾಬಾದ್ ಮೂಲದ ಪ್ರವಾಸಿಗರಾದ ಸುಚೀತ್ ಕೆ., ಭಾರ್ಗವ ರೆಡ್ಡಿ ಇವರನ್ನು ಒಳಗೊಂಡ ತಂಡ ಓಂ ಬೀಚ್ ಮುಖಾಂತರ ಪ್ಯಾರಡೈಸ್ ಬೀಚ್ ಕಡೆಗೆ ಕಾಡಿನಲ್ಲಿ ಟ್ರೆಕಿಂಗ್ ಹೋಗಿದ್ದರು. ಬರಲು ದಾರಿಕಾಣದೇ ಅಸಹಾಯಕರಾದಾಗ ಪೊಲೀಸ್ ಠಾಣೆಗೆ ಕರೆಮಾಡಿ ಮಾಹಿತಿ ತಿಳಿಸಿದರು.
ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜೇಶ ನಾಯ್ಕ ಮತ್ತು ಸಚಿನ್ ನಾಯ್ಕ ತಕ್ಷಣ ಮೊಬೈಲ್ ಲೊಕೇಶನ್ ಮುಖಾಂತರ ದಾರಿತಪ್ಪಿ ಸಂಕಷ್ಟದಲ್ಲಿದ್ದ ಈ ತಂಡದವರನ್ನು ಪತ್ತೆಹಚ್ಚಿದರು. ಇವರಲ್ಲಿ ಇಬ್ಬರು ಯುವಕರು ಹಾಗೂ ಒಬ್ಬಳು ಯುವತಿಯನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಆಹಾರವಿಲ್ಲದೇ ನಿತ್ರಾಣವಾಗಿದ್ದ ಇವರನ್ನು ಕರೆತರಲು ರಕ್ಷಣೆ ಮಾಡಿದ ಪೊಲೀಸ್ ಸಿಬ್ಬಂದಿಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಹಾಗೇ ಕಳೆದ 2 ತಿಂಗಳ ಹಿಂದೆ ಇದೇ ರೀತಿ ಒಂದು ತಂಡ ದಾರಿತಪ್ಪಿ ಪೊಲೀಸರೇ ಅವರನ್ನು ರಕ್ಷಣೆ ಮಾಡಿದ್ದರು.