ಕಾರವಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ನೌಕರ ಸಂಘದಿ0ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು. ಸರಕಾರಿ ನೌಕರರಿಗೆ ಜೀವನ ನಿರ್ವಹಣೆಗೆ ಅವಶ್ಯಕವಿರುವ 7ನೇ ವೇತನ ಆಯೋಗವನ್ನು ಜಾರಿಗೊಳಿಸಲು ಸರ್ಕಾರವು ಆಯೋಗದ ಅವಧಿಯನ್ನು 6 ತಿಂಗಳ ಕಾಲ ಮುಂದೂಡಿದ್ದು, ಆದಷ್ಟು ಬೇಗ ಆಯೋಗದ ವರದಿಯನ್ನು ಜಾರಿಗೊಳಿಸಬೇಕಿದೆ. ಸರ್ಕಾರಿ ನೌಕರರಿಗೆ ಈಗಿರುವ ಎನ್‌ಪಿಎಸ್ ವ್ಯವಸ್ಥೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ಈಗಾಗಲೇ ಸಮಿತಿ ರಚಿಸಲು ಆದೇಶಿಸಿದ್ದು, ಕೂಡಲೇ ಸಮಿತಿಯನ್ನು ರಚಿಸಿ ವರದಿ ಸಲ್ಲಿಸಿ ಎನ್‌ಪಿಎಸ್ ವ್ಯವಸ್ಥೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿ ಸರಕಾರಿ ನೌಕರರಿಗೆ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾಧ್ಯಕ್ಷ ಸಂಜೀವಕುಮಾರ ನಾಯ್ಕ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.